ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಮಕ್ಕಳ ಕಲಿಕೆಗೆ ಅನುಕೂಲ ಮಾಡಲು ಮಂಡ್ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಕಳೆದ ವರ್ಷ ಚಾಲನೆ ನೀಡಿದ್ದ ಯೂಟ್ಯೂಬ್ನಲ್ಲಿಯೇ ಪಾಠ ಬೋಧನೆ ಹೊಸತನದೊಂದಿಗೆ ಶೀಘ್ರ ಪುನಾರಂಭವಾಗಲಿದೆ.
8ರಿಂದ 10ನೇ ತರಗತಿವರೆಗೆ ಸರ್ಕಾರದಿಂದ ದೂರದರ್ಶನದ ಮೂಲಕ ಪಾಠ ಕಲಿಸಲಾಗುತ್ತಿ್ತ್ತು. ಈ ಹಿನ್ನೆಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಯೂಟ್ಯೂಬ್ ಬಳಿಸಿಕೊಂಡು ವಿಭಿನ್ನ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿತ್ತು. ಇದೀಗ ಮತ್ತೆ ಯೂಟ್ಯೂಬ್ನಲ್ಲಿ ಪಾಠ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
4.5 ಲಕ್ಷ ರೂ. ವೆಚ್ಚದಲ್ಲಿ ಸ್ಟುಡಿಯೋ: ಕಳೆದ ಬಾರಿ ತರಗತಿಯಲ್ಲಿ ಸ್ಕ್ರೀನ್ ಅಳವಡಿಸಿ ಕ್ಯಾಮರಾ ಮತ್ತು ಲೈಟ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಹೈಟೆಕ್ ಸ್ಟುಡಿಯೋ ಮಾಡಲಾಗಿದೆ. ಇದಕ್ಕಾಗಿ 4.5 ಲಕ್ಷ ರೂ. ವ್ಯಯಿಸಲಾಗಿದೆ. ಡಯಟ್ನಲ್ಲಿ ಆಯೋಜಿಸುವ ತರಬೇತಿಗೆ ಸರ್ಕಾರದಿಂದ ಇಂತಿಷ್ಟು ಎಂದು ಬಿಡುಗಡೆಯಾಗುವ ಹಣವನ್ನು ಉಳಿಸಿಕೊಂಡು, ಇಲಾಖೆಯ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ನೋಡಲು ಆಕರ್ಷಕವಾಗಿದ್ದು, ಬೋಧನೆ ಮಾಡುವ ಶಿಕ್ಷಕರಿಗೂ ಹಾಗೂ ವಿಡಿಯೋದಲ್ಲಿ ನೋಡುವ ಮಕ್ಕಳಿಗೆ ಇಷ್ಟವಾಗುವಂತಿದೆ. ಇನ್ನು ಡಿಎಸ್ಇಆರ್ಟಿಯಿಂದ ಕೆಲವೆಡೆ ನಿರ್ಮಾಣ ಮಾಡಿರುವುದನ್ನು ಹೊರತುಪಡಿಸಿ ಈ ರೀತಿಯ ಹೈಟೆಕ್ ಸ್ಟುಡಿಯೋ ಹೊಂದಿರುವ ರಾಜ್ಯದ ಮೊದಲ ಡಯಟ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ನುರಿತ ಶಿಕ್ಷಕರಿಂದ ಬೋಧನೆ: ಕಳೆದ ಸಾಲಿನಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಆಯ್ಕೆ ಮಾಡಿಕೊಂಡ 23 ಜನ ಶಿಕ್ಷಕರಿಗೆ ತರಬೇತಿ ನೀಡಲಾಗಿತ್ತು. ಇವರಿಗೆ 7ನೇ ತರಗತಿವರೆಗೆ ಪಾಠ ಮಾಡಲು ಅವಕಾಶವಿತ್ತು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಸ್ವಯಂಪ್ರೇರಿತರಾಗಿ ಬರುವ ಶಿಕ್ಷಕರಿಗೆ ಅವಕಾಶದ ಜತೆಗೆ 1ರಿಂದ 10ನೇ ತರಗತಿವರೆಗೆ ಪಾಠ ಮಾಡಲು ಅನುಮತಿ ನೀಡಲಾಗುತ್ತಿದೆ.
ಕಳೆದ ಬಾರಿ ಡಯಟ್ನ ನಿರ್ವಹಣೆ ಹಾಗೂ ಶಿಕ್ಷಕರ ಪಠ್ಯ ಬೋಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿಯೂ ಉತ್ತಮ ಸ್ಪಂದನೆ ಸಿಗುವ ಭರವಸೆ ಹೆಚ್ಚಿದೆ. ಮೊದಲ ಹಂತದಲ್ಲಿ ಪ್ರೋಮೋಗಳನ್ನು ಸಿದ್ಧಪಡಿಸಿ ಎಲ್ಲರಿಗೂ ಪರಿಚಯಿಸಲಾಗುತ್ತದೆ. ಬಳಿಕ ಶಿಕ್ಷಕರು ಬೋಧನೆ ಆರಂಭಿಸಲಿದ್ದಾರೆ. ಪಾಠವನ್ನು ಮೊದಲು ಡಯಟ್ನಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ವಿಷಯಗಳು ಸರಿಯಾಗಿರುವುದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಅಪ್ಲೋಡ್ ಮಾಡಲಾಗುತ್ತದೆ. ಇನ್ನು ವಿಡಿಯೋ ಮಾಡುವುದರಿಂದ ಹಿಡಿದು ಮಿಕ್ಸಿಂಗ್ ಇತ್ಯಾದಿಗಳನ್ನು ಶಿಕ್ಷಕರೇ ಮಾಡುತ್ತಿದ್ದಾರೆ. ಇವರಿಗೆ ಅಜೀಂ ಪ್ರೇಮ್ೕ ಸಂಸ್ಥೆ ಸಾಥ್ ನೀಡುತ್ತಿದೆ.
ಒಟ್ಟಾರೆ ಕರೊನಾದಿಂದಾಗಿ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯುಂಟಾಗಿರುವ ಸಂದರ್ಭದಲ್ಲಿ ಡಯಟ್ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈಗಾಗಲೇ ಮಂಡ್ಯ ಡಯಟ್ನ ಕಾರ್ಯಕ್ಕೆ ಇಲಾಖೆಯ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಕ್ಕಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಂಡರೆ ಎಲ್ಲರ ಶ್ರಮ ಸಾರ್ಥಕ ಎನ್ನಿಸಿಕೊಳ್ಳಲಿದೆ.
ಮೂರು ಸಾವಿರ ನೋಂದಣಿ
‘ಸವಿ ಮಂಡ್ಯ’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ನಲ್ಲಿ ಪಾಠ ಅಪ್ಲೋಡ್ ಆಗಲಿದೆ. ಹಿಂದೆ ಚಾನಲ್ಗೆ 959 ಜನರು ನೋಂದಣಿಯಾಗಿದ್ದರು. ಇದೀಗ 3,100 ಜನರು ನೋಂದಣಿ ಮಾಡಿಕೊಂಡಿದ್ದಾರೆ. ವಿಡಿಯೋಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ. ಅಪ್ಲೋಡ್ ಮಾಡಿದ ಬಳಿಕ ಅದರ ಲಿಂಕ್ಅನ್ನು ಬಿಇಒ, ಬಿಆರ್ಸಿ, ಬಿಆರ್ಪಿ, ಮುಖ್ಯಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ.
ಕೋಟ್
ಕಳೆದ ಬಾರಿಗಿಂತ ಈ ಸಲ ಸ್ವಲ್ಪ ವಿಭಿನ್ನವಾಗಿರಲಿದೆ. ಬೋಧನೆಗೆ ಅನುಕೂಲವಾಗಲೆಂದು ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ಪಾಠ ಮಾಡಲು ಶಿಕ್ಷಕರು ಸಿದ್ಧವಾಗಿದ್ದಾರೆ. ಮುಂದಿನ ವಾರದಿಂದ ಚಾಲನೆ ಸಿಗಲಿದೆ. ವಿದ್ಯಾರ್ಥಿಗಳು ಈ ವಿಡಿಯೋಗಳನ್ನು ನೋಡಿ ಕಲಿಕಾಭ್ಯಾಸ ಮಾಡಿಕೊಳ್ಳಬಹುದು.
| ಶಿವಮಾದಪ್ಪ ಡಯಟ್ ಪ್ರಾಂಶುಪಾಲ