ಜಿಲ್ಲೆ

Web Exclusive | ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಡೆಗೆ ವಿದ್ಯಾರ್ಥಿಗಳ ವಿರೋಧ: ಪರೀಕ್ಷೆ ಮುಗಿಯದಿದ್ದರೂ ಮುಂದಿನ ತರಗತಿಗೆ ಸಿದ್ಧತೆ!

Webdesk - Ravikanth

ಬೆಳಗಾವಿ: ಪದವಿ ಹಾಗೂ ಸ್ನಾತಕೋತ್ತರ ಪದವಿಯ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳೇ ಇನ್ನೂ ಮುಗಿದಿಲ್ಲ. ಅಷ್ಟರಲ್ಲೇ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್​ಲೈನ್ ಮೂಲಕ ನಡೆಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್​ಸಿಯು) ಮುಂದಾಗಿದ್ದು, ವಿವಿ ನಡೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಪದವಿ 1, 3, 5ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿ 1, 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಈಗಾಗಲೇ ಕೆಲ ವಿಷಯಗಳ ಪರೀಕ್ಷೆ ಎದುರಿಸಿದ್ದಾರೆ. ಉಳಿದ ವಿಷಯಗಳ ಪರೀಕ್ಷೆಗೂ ಸಿದ್ಧತೆ ನಡೆಸಿದ್ದಾರೆ. ಆದರೆ, ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೆ ಈ ಪರೀಕ್ಷೆಗಳು ನಡೆಯುತ್ತವೆಯೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಿರುವಾಗ, ಆನ್​ಲೈನ್ ತರಗತಿ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.

ಪರೀಕ್ಷೆ ಕುರಿತು ಸ್ಪಷ್ಟಪಡಿಸಲಿ: ಕರೊನಾ ಹಾವಳಿ ತಗ್ಗಿದ ನಂತರ ಪರೀಕ್ಷೆ ನಡೆಸುವುದಾದರೆ, ನಮಗೆ ಓದಲು ಕಾಲಾವಕಾಶ ನೀಡಬೇಕು. ಪರೀಕ್ಷೆ ಮುಂದಿಟ್ಟುಕೊಂಡು ಆನ್​ಲೈನ್ ತರಗತಿಗೆ ಹಾಜರಾದರೆ ಕಲಿಕೆ ಪರಿಣಾಮಕಾರಿಯಾಗದು. ಹೀಗಾಗಿ ಪರೀಕ್ಷೆ ಕುರಿತು ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೊಂದಲಕ್ಕೊಳಗಾಗಿರುವ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪರೀಕ್ಷೆಗೆ ಅಣಿಯಾಗಿತ್ತು: ಕಳೆದ ವರ್ಷ ಲಾಕ್​ಡೌನ್ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕ ನಡೆಸಿದ್ದ ತರಗತಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿರಲಿಲ್ಲ. ಹೀಗಾಗಿ, ಮತ್ತೆ ಆಫ್​ಲೈನ್ ಮೂಲಕ ತರಗತಿ ನಡೆಸಿ, ಪರೀಕ್ಷೆ ನಡೆಸಲು ವಿವಿ ಮುಂದಾಗಿತ್ತು.

ಆನ್​ಲೈನ್ ಕ್ಲಾಸ್ ಸವಾಲು: ಪ್ರಸ್ತುತ ಆನ್​ಲೈನ್ ತರಗತಿ ನಡೆಸಲು ವಿವಿ ಆದೇಶವೇನೋ ಹೊರಡಿಸಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ತಮ್ಮೂರಿಗೆ ತೆರಳಿದ್ದಾರೆ. ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಆನ್​ಲೈನ್ ತರಗತಿಗೆ ಹಾಜರಾಗುವುದು ಕಷ್ಟವಾಗಲಿದೆ.

ಇನ್ನು ಕೆಲವು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್​ಫೋನ್​ಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆನ್​ಲೈನ್ ತರಗತಿಗೆ ಇಂಟರ್​ನೆಟ್ ಡಾಟಾ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಕರೊನಾ ಕಾಲಘಟ್ಟದಲ್ಲಿ ಉದ್ಯೋಗವಿಲ್ಲದೆ ಕಂಗಾಲಾಗಿರುವ ನಮ್ಮ ಪಾಲಕರು ಈಗ ನೂರಾರು ರೂ. ಖರ್ಚು ಮಾಡಲು ಸಾಧ್ಯವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.

1.90 ಲಕ್ಷ ವಿದ್ಯಾರ್ಥಿಗಳು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ. 389 ಪದವಿ ಕಾಲೇಜ್​ಗಳಲ್ಲಿ 1.85 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ 5,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನೆಟ್​ವರ್ಕ್ ಸಮಸ್ಯೆ, ಸ್ಮಾರ್ಟ್ ಫೋನ್ ಇಲ್ಲದ್ದರಿಂದ ಆನ್​ಲೈನ್ ತರಗತಿ ನಡೆಸಬೇಡಿ ಎಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ಕುರಿತು ಶೀಘ್ರ ಸ್ಪಷ್ಟಪಡಿಸಲಾಗುವುದು.

| ಪ್ರೊ.ಬಸವರಾಜ ಪದ್ಮಸಾಲಿ ಕುಲಸಚಿವ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ