ಜಿಲ್ಲೆ

ಮಾನ್ಸೂನ್​ ಪ್ರಬಲಕ್ಕೆ ಪೂರಕ ವಾತಾವರಣ ಹಿನ್ನೆಲೆ: ಜೂ.12ರಿಂದ ರಾಜ್ಯದಲ್ಲಿ ಮುಂಗಾರು ಬಿರುಸು

ಬೆಂಗಳೂರು: ವಾಡಿಕೆಗಿಂತ ಮುನ್ನ ಪ್ರವೇಶಿಸಿ ಅಬ್ಬರಿಸಿ ದುರ್ಬಲಗೊಂಡಿದ್ದ ನೈಋತ್ಯ ಮಾನ್ಸೂನ್​ ( ಮುಂಗಾರು) ಜೂ.9ರಿಂದ ರಾಜ್ಯದಲ್ಲಿ ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ,ಯಾದಗಿರಿ, ಗದಗ, ಬಳ್ಳಾರಿ, ವಿಜಯನಗರದಲ್ಲಿ ಜೂ.12ರಿಂದ ಜೂ.14ರವರೆಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಜೂ.13ರಿಂದ ಮುಂದಿನ 2 ದಿನ, ಕೋಲಾರದಲ್ಲಿ ಜೂ.12ರಂದು ಬಿರುಸಾಗಿ ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿಯೂ ಜೂ.14ರಂದು ಆರೆಂಜ್​ ಅಲರ್ಟ್ ನೀಡಲಾಗಿದೆ.

ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜೂ.8ರಿಂದ ಜೂ.12ರವರೆಗೆ ಒಣಹವೆ ಇರಲಿದ್ದು, ಜೂ 13ರಿಂದ ಈ ಭಾಗಗಳಲ್ಲಿ ಮಳೆ ಶುರುವಾಗಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಸೇರಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂದಿನ 4 ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಜೂ.12ರಿಂದ ಈ ಜಿಲ್ಲೆಗಳಲ್ಲಿ ತುಸು ಬಿರುಸಾಗಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ಹವಾಮಾನ ಸ್ಥಿತಿಗತಿ ಅವಲೋಕಿಸಿದರೆ ಬಂಗಾಳ ಉಪಸಾಗರ ಮತ್ತು ಅರಬ್ಬಿ ಸಮುದ್ರದಲ್ಲಿ ಮಾನ್ಸೂನ್​ ಬಲಗೊಳ್ಳಲು ಪೂರಕ ವಾತಾವರಣ ಉಂಟಾಗುತ್ತಿದೆ. ಸಮುದ್ರ ಮಟ್ಟದಲ್ಲಿ ಮೇಲ್ಮೆ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಜೂ.9ರಿಂದ ಮಾನ್ಸೂನ್​ ಬಿರುಸುಗೊಳ್ಳಲು ಶುರುವಾಗಲಿದೆ. ಆದ್ದರಿಂದ, ರಾಜ್ಯದಲ್ಲಿ ಜೂ.12ರಿಂದ ಜೋರಾಗಿ ಮಳೆ ಸುರಿಯಲಿದೆ.

| ಸಿ.ಎಸ್​.ಪಾಟೀಲ್​. ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ.