ಜಿಲ್ಲೆ

ಹವಾಮಾನ ಆಧಾರಿತ ವಿಮೆಗಿಲ್ಲ ಅವಕಾಶ

ಬ್ಯಾಡಗಿ: ಶುಂಠಿ, ಅಡಕೆ, ಹಸಿಮೆಣಸಿನಕಾಯಿ, ಗಡ್ಡೆಕೋಸು (ಕ್ಯಾಬೀಜ) ಬೆಳೆದ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ವಿಮೆ ತುಂಬಲು ಅವಕಾಶ ಇಲ್ಲದಂತಾಗಿದೆ. ಸರ್ಕಾರದ ಈ ವ್ಯವಸ್ಥೆ ರೈತ ವಿರೋಧಿ ನೀತಿಯಾಗಿದ್ದು, ಶೀಘ್ರದಲ್ಲಿಯೇ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದ್ದಾರೆ.

ಈ ಕುರಿತು ಭಾನುವಾರ ಪ್ರಕಟಣೆ ನೀಡಿದ ಅವರು, ಸರ್ಕಾರ ಹಾಗೂ ವಿಮೆ ಕಂಪನಿಗಳು ಹವಾಮಾನ ಆಧಾರಿತ ವಿಮೆ ತುಂಬಿಸಿಕೊಳ್ಳುವ ಅವಧಿಯನ್ನು ಜೂ. 30ಕ್ಕೆ ಕೊನೆಗೊಳಿಸಿದೆ. ಆದರೆ, ಈ ಕುರಿತು ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸರ್ಕಾರದ ಸಂಸ್ಥೆಗಳು ಸಮರ್ಪಕ ಮಾಹಿತಿ ನೀಡಿಲ್ಲ. ಆನ್​ಲೈನ್​ನ ವೆಬ್​ಸೈಟ್​ನಲ್ಲಿ ತಪ್ಪು ಮಾಹಿತಿ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಹಾವೇರಿಗೆ ಟೆಂಡರ್ ಹಾಕಿಲ್ಲ

ಶುಂಠಿ, ಅಡಕೆ, ಹಸಿಮೆಣಸಿನಕಾಯಿ, ಗಡ್ಡೆಕೋಸು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ತುಂಬಿಸಿಕೊಳ್ಳಲು ಹಾವೇರಿ ಜಿಲ್ಲೆಗೆ ಯಾರೂ ಟೆಂಡರ್ ಹಾಕಿಲ್ಲ, ಜಿಲ್ಲೆಯ ರೈತರು ಹಣ ತುಂಬುವುದಿಲ್ಲವೇ ಅಥವಾ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಟೆಂಡರ್ ಹಾಕಿಲ್ಲವೇ..? ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಇಲಾಖೆಗಳು ಏಕೆ ಮೌನ ಧೋರಣೆ ತಾಳಿವೆ ಎಂದು ಪ್ರಶ್ನಿಸಿದ್ದಾರೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳು ಗತಿಸಿದರೂ ಜಿಲ್ಲೆಯ ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಮುಂಗಾರು ಮಳೆ ವಿಫಲವಾಗಿದೆ. ಮಳೆ ಕೊರತೆಯಿಂದ ಬಿತ್ತಿದ ಬೀಜ, ಗೊಬ್ಬರಕ್ಕೆ ಹಣ ಖರ್ಚು ಮಾಡಿದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ತೀವ್ರ ಸಮಸ್ಯೆ ಉಂಟಾದರೂ ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಕ್ಕೆ ತೆರಳಿ ಸಮಸ್ಯೆ ಆಲಿಸಿಲ್ಲ. ಸೌಜನ್ಯಕ್ಕೂ ರೈತ ಪರ ಸಭೆ ನಡೆಸಿ, ನೈಜ ಪರಿಸ್ಥಿತಿಯನ್ನು ಸಂಗ್ರಹಿಸಿಲ್ಲ. ಜಿಲ್ಲೆಯ ರೈತರಿಗೆ ವಿಮೆ ತುಂಬಲು ಯಾವೊಬ್ಬ ವಿಮೆ ಕಂಪನಿಯವರೂ ಟೆಂಡರ್ ಹಾಕಲು ಮುಂದೆ ಬರುತ್ತಿಲ್ಲ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ತೋಟಗಾರಿಕೆ, ಕೃಷಿ ಇಲಾಖೆಯಿಂದಲೇ ವಿಮೆ ತುಂಬಿಸಿಕೊಳ್ಳಲು ಮುಂದಾಗಲಿ. ಫೆಬ್ರವರಿ ತಿಂಗಳಲ್ಲಿ ಶುಂಠಿ, ಮೇ ತಿಂಗಳಲ್ಲಿ ಹಸಿಮೆಣಸಿನಕಾಯಿ, ಜೂನ್, ಜುಲೈ, ಆಗಸ್ಟ್ ನಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆಗಳು ಹಾನಿಗೊಳಗಾಗಲಿವೆ. ಈಗ ವೆಬ್​ಸೈಟ್​ನಲ್ಲಿ ಜೂ. 30 ಕಡೆಯ ದಿನವೆಂದು ಪ್ರಕಟಿಸಲಾಗಿದೆ. ಇದನ್ನು ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಈ ಅವಧಿ ಟೆಸ್ಟೆಡ್ ಎನ್ನುತ್ತಿದ್ದಾರೆ. ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ನಡೆ ಕುರಿತು ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ಹವಾಮಾನ ಆಧಾರಿತ ವಿಮೆ ಕುರಿತು ಸ್ಪಷ್ಟ ಆದೇಶ ಮಾಡದಿದ್ದಲ್ಲಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.