ಹಾವೇರಿ: ಕರೊನಾ ಮಹಾಮಾರಿ ದೂರವಿಡಲು, ಜನರು ಆರೋಗ್ಯದ ದೃಷ್ಟಿಯಿಂದ ಸದಾ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಈ ಕುರಿತು ಜಿಲ್ಲೆಯಾದ್ಯಂತ ಮಾಸ್ಕ್ ದಿನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದ್ದು, ನಂತರ ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಸ್ಪತ್ರೆ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಾಸ್ಕ್ ದಿನ ಆಚರಣೆ ಜಾಗೃತಿ ಜಾಥಾಕ್ಕೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಇಂತಹುದೇ ಮಾಸ್ಕ್ ಹಾಕಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿಯೇ ಬಟ್ಟೆಯ ಮಾಸ್ಕ್ ತಯಾರಿಸಿಕೊಂಡು ಬಳಕೆ ಮಾಡಬಹುದು. ನಿಯಮಿತವಾಗಿ ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅರಿವು ಮೂಡಿಸಿದ ನಂತರವೂ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿದವರಿಗೆ 100 ರೂ. ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದರು.
ಕಂಟೇನ್ಮೆಂಟ್ ಜೋನ್ನಲ್ಲಿ ಕಾರ್ಯನಿರ್ವಹಿಸುವವರಿಗೆ ಹಾಗೂ ಆರೋಗ್ಯ ತಪಾಸಣೆಗೆ ಮನೆ ಮನೆಗೆ ಭೇಟಿ ನೀಡುವವರಿಗೆ, ಫೀವರ್ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುವವರಿಗೆ, ಐಸೋಲೇಷನ್ ವಾರ್ಡ್ ಹಾಗೂ ಕೋವಿಡ್ ಚಿಕಿತ್ಸೆಯಲ್ಲಿ ನಿರತರಾದವರಿಗೆ ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್ ನೀಡಲಾಗುತ್ತಿದೆ. ಇತರರಿಗೆ ಸಾಮಾನ್ಯ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಮಾತನಾಡಿದರು.
ಎಸ್ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಸಿ ಡಾ. ದಿಲೀಪ್ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಡಾ. ವಿಶ್ವನಾಥ ಸಾಲಿಮಠ, ತಾಪಂ ಇಒ ಬಸವರಾಜಪ್ಪ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ನೀಲೇಶ, ಜಿಲ್ಲಾ ನಿರ್ವಿುತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶಕುಮಾರ ಇತರರಿದ್ದರು.
ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ: ಮಾಸ್ಕ್ ದಿನದ ಅಂಗವಾಗಿ ಹಮ್ಮಿಕೊಂಡ ಜಾಥಾದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಸಿಇಒ ರಮೇಶ ದೇಸಾಯಿ ಪಿಬಿ ರಸ್ತೆ, ಎಂಜಿ ರಸ್ತೆಯ ಹಣ್ಣು, ಹೂವು, ಬೀದಿಯ ವ್ಯಾಪಾರಸ್ಥರಿಗೆ, ಕಾರ್ವಿುಕರಿಗೆ, ರೈತರಿಗೆ, ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಿದರು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಫಲಕ ಹೊತ್ತು ಜಿಲ್ಲಾಸ್ಪತ್ರೆ, ಹೊಸಮನಿ ಸಿದ್ದಪ್ಪ ವೃತ್ತ, ಜೆಪಿ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಘೊಷಣೆಗಳೊಂದಿಗೆ ಸಂಚರಿಸಿದರು.