ಧಾರವಾಡ: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಜನರು ಮಾಸ್ಕ್ ಧರಿಸದೆ, ಪರಸ್ಪರ ಅಂತರ ಪಾಲಿಸದೆ ಸಂಚರಿಸುತ್ತಿದ್ದಾರೆ. ಅಧಿಕಾರಿಗಳು ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಿ, ನಿತ್ಯ ತಪ್ಪದೆ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗಿನ ವಿಡಿಯೋ ಸಂವಾದದ ನಂತರ ಅಧಿಕಾರಿಗಳಿಗೆ ಸೂಚಿಸಿದರು.
ಕರೊನಾ ಇಲ್ಲ ಎಂಬ ಭಾವನೆಯಿಂದ ಜನರು ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪು ಸೇರುವುದು ಸಾಮಾನ್ಯವಾಗುತ್ತಿದೆ. ಈ ರೀತಿಯ ಭಾವನೆ ಹಾಗೂ ವರ್ತನೆಗಳಿಂದ ಕರೊನಾದ 2ನೇ ಅಲೆಗೆ ತುತ್ತಾಗುವ ಸಾಧ್ಯತೆ ಇದೆ. ವಿವಿಧ ಇಲಾಖೆಗಳಿಂದ ನಿತ್ಯ ಒಂದಲ್ಲ ಒಂದು ರೀತಿ ಜಾಗೃತಿ, ತಿಳಿವಳಿಕೆ ನೀಡಿದರೂ ಕೆಲವರು ಉದಾಸೀನತೆ ತೋರುತ್ತಿದ್ದಾರೆ. ಹೀಗಾಗಿ ಮಾಸ್ಕ್ ಅಭಿಯಾನಕ್ಕೆ ರಚಿಸಿರುವ ಅಧಿಕಾರಿಗಳ ತಂಡ ಪರಿಣಾಮಕಾರಿಯಾಗಿ ಅಭಿಯಾನ ಜಾರಿಗೊಳಿಸಬೇಕು ಎಂದರು.
ಮಾಸ್ಕ್ ಧರಿಸದೆ ಸಂಚರಿಸುವವರಿಗೆ ಸ್ಥಳದಲ್ಲೇ 250 ರೂ. ದಂಡ ವಿಧಿಸಬೇಕು. ದಂಡ ಕಟ್ಟಿದ ವ್ಯಕ್ತಿ ಮಾಸ್ಕ್ ಧರಿಸದೆ ತಪ್ಪನ್ನು ಪುನರಾವರ್ತಿಸಿದರೆ ಮತ್ತೆ ದಂಡ ವಿಧಿಸಬೇಕು. ಈ ಮೂಲಕ ಜನರಿಗೆ ಮಾಸ್ಕ್ ಧರಿಸಿ; ಇಲ್ಲ ದಂಡ ಕಟ್ಟಿ ಎಂಬ ಕಠಿಣ ಸಂದೇಶ ತಲುಪಿಸಬೇಕು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತರ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಾಸ್ಕ್ ಕಾರ್ಯಾಚರಣೆ ಕೈಗೊಳ್ಳಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ನಗರ ಸಂಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಮಾಸ್ಕ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಮಹಾನಗರದ ಗಡಿ ಭಾಗ ಹಾಗೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ, ನಗರಗಳಲ್ಲಿ ಕರೊನಾ ಜಾಗೃತಿ ಮತ್ತು ಮಾಸ್ಕ್ ಅಭಿಯಾನ ಚುರುಕುಗೊಳಿಸಲಾಗುವುದು ಎಂದರು.
ಡಿಸಿಪಿ ರಾಮರಾಜನ್ ಕೆ. ಮಾತನಾಡಿ, ಅವಳಿನಗರದ ಪ್ರಮುಖ ವೃತ್ತ, ಬಸ್ನಿಲ್ದಾಣ, ಸರ್ಕಾರಿ ಕಚೇರಿ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ ಮಾಡಲಾಗುವುದು. ಸಹಾಯಕ ಪೊಲೀಸ್ ಆಯುಕ್ತರ ಮೂಲಕ ವಿವಿಧ ಪೊಲೀಸ್ ಅಧಿಕಾರಿಗಳನ್ನು ಈ ಕಾರ್ಯದಲ್ಲಿ ತೊಡಗಿಸಿ ಅಭಿಯಾನ ಯಶಸ್ವಿಗೊಳಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಆರ್ಸಿಎಚ್ಒ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಡಾ. ಲಕ್ಷ್ಮೀಕಾಂತ ಲೋಕರೆ, ಡಿಮ್ಹಾನ್ಸ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ನಾಯಕ, ಇತರರು ಇದ್ದರು.