ಬೆಂಗಳೂರು: ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಬೆಂಗಳೂರಿನಲ್ಲಿ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಯೋಜನೆ, ಇನ್ನಷ್ಟು ಕ್ರಮಗಳ ಚಿಂತನೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಸಿಎಂ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಿರ್ದೇಶನದಂತೆ ವಿಪತ್ತು ನಿರ್ವಹಣಾ ಕೋಶದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಯಲಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯ ಸಚಿವರು, ಸಂಸದ-ಶಾಸಕರು ಪಾಲ್ಗೊಳ್ಳಲಿದ್ದು, ತಜ್ಞರ ವರದಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯಗಳ ಕುರಿತು ಚರ್ಚಿಸಲಾಗುವುದು ಎಂದರು.
ವೈಜ್ಞಾನಿಕ ನೆಲೆಗಟ್ಟನಲ್ಲಿ ಬಿಗಿ ಕ್ರಮಗಳ ಮೂಲಕ ರಾಜಧಾನಿಯಲ್ಲಿ ಕರೊನಾ ಸೋಂಕು ಕಟ್ಟಿ ಹಾಕುವುದಕ್ಕೆ ಮಾರ್ಗೋಪಾಯ, ಕಾರ್ಯತಂತ್ರ ರೂಪಿಸಲಾಗುವುದು. ಲಾಕ್ ಡೌನ್ ಬಗ್ಗೆ ಕೆಲವರು ವೈಯಕ್ತಿಕ ಅಭಿಪ್ರಾಯ, ಆಶಯ ವ್ಯಕ್ತಪಡಿಸಿರಬಹುದು. ಆದರೆ ಸಾಮೂಹಿಕ ತೀರ್ಮಾನದ ಮೇಲೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆತಂಕ ಅನಗತ್ಯ: ಕರೊನಾ 2ನೇ ಅಲೆ ಬಗ್ಗೆ ಅನಗತ್ಯ ಆತಂಕ ಸೃಷ್ಟಿಸುವುದರಿಂದ ಕಡಿಮೆ ರೋಗ ಲಕ್ಷಣವುಳ್ಳವರು ಆಸ್ಪತ್ರೆಗೆ ದಾಖಲಾಗುತ್ತಾರೆ. ಇದರಿಂದಾಗಿ ನಿಜವಾಗಿಯೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಸೋಂಕಿತರಿಗೆ ಸಕಾಲಕ್ಕೆ ಹಾಸಿಗೆ ಸಿಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ಮಾತ್ರವಲ್ಲ ಇಡೀ ದೇಶದಲ್ಲಿ 2ನೇ ಅಲೆ ಪ್ರಖರತೆ, ವ್ಯಾಪಕತೆ, ಹರಡುವಿಕೆ ವೇಗ ಹೆಚ್ಚಿದೆ. ಸೋಂಕು ದೃಢಪಟ್ಟ ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕೆಂದೇನಿಲ್ಲ. ಸೋಂಕು ಲಕ್ಷಣರಹಿತರು, ಅಲ್ಪ ಪ್ರಮಾಣದ ಸೋಂಕು ಲಕ್ಷಣವುಳ್ಳವರು ಮನೆಯಲ್ಲೇ ಪ್ರತ್ಯೇಕವಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಪಡೆಯಲು ಅವಕಾಶವಿದೆ ಎಂದು ಜನರಿಗೆ ಡಾ.ಕೆ.ಸುಧಾಕರ್ ಮನವಿ ಮಾಡಿದರು.