ಜಿಲ್ಲೆ

ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ಒತ್ತಾಯಿಸಲಾಗುವುದು

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇನ್ಪೋಸಿಸ್ ಹುಬ್ಬಳ್ಳಿ ಕಚೇರಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಕಂಪನಿಯ ಮುಖ್ಯಸ್ಥರಿಗೆ ಒತ್ತಾಯಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ಮಂಗಳವಾರ ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ಸುಧಾ ಮೂರ್ತಿ ಅವರೊಂದಿಗೆ ರ್ಚಚಿಸುವುದಾಗಿ ಹೇಳಿದರು.

ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ಐಟಿ ಉದ್ಯಮ ಸ್ಥಾಪಿಸಲು ಇನ್ಪೋಸಿಸ್ ಲಿಮಿಟೆಡ್ ಸಂಸ್ಥೆಗೆ ಕೆಐಎಡಿಬಿ ಮೂಲಕ 2015ರಲ್ಲಿ 43.05 ಎಕರೆ ಜಮೀನನ್ನು ಪ್ರತಿ ಎಕರೆಗೆ 50 ಲಕ್ಷ ರೂ. ನಂತೆ ಗುತ್ತಿಗೆ ಮತ್ತು ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡಿ ಸ್ವಾಧೀನ ಪತ್ರ ನೀಡಲಾಗಿದೆ. ಕರಾರಿನ ಪ್ರಕಾರ ಎರಡು ವರ್ಷಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ. ಆದರೆ, ಅವರು 43.05 ಎಕರೆಯಲ್ಲಿ 20 ಎಕರೆ ಮಾತ್ರ ಕಟ್ಟಡ, ರಸ್ತೆ, ಪುಡ್​ಪಾರ್ಕ್, ರ್ಪಾಂಗ್ ಮುಂತಾದ ಸೌಲಭ್ಯಗಳಿಗೆ ಬಳಕೆ ಮಾಡಿಕೊಂಡಿರುವರು. ಉಳಿದ 23 ಎಕರೆ ಜಮೀನನ್ನು ಮುಂಬರುವ ದಿನಗಳಲ್ಲಿ ಯೋಜನೆ ವಿಸ್ತರಣೆಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಚಿವರು ಉತ್ತರಿಸಿದರು.

ಇನ್ಪೋಸಿಸ್ ಸಂಸ್ಥೆ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ, ಅವರು ನಿರೀಕ್ಷಿತ ಮಟ್ಟದಲ್ಲಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳಿ, ಕೇವಲ 280 ಜನರಿಗೆ ಉದ್ಯೋಗ ನೀಡಿದ್ದು ಕೂಡ ಬೇಸರದ ಸಂಗತಿ ಎಂದು ಸಂಕನೂರ ಅಭಿಪ್ರಾಯಿಸಿದರು.