ಜಿಲ್ಲೆ

ಹಬ್ಬಗಳ ಆಚರಣೆ, ಮಹತ್ವ ಕುರಿತು ಮಕ್ಕಳಿಗೆ ತಿಳಿಸಿಕೊಡಬೇಕು: ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್

ಹಾಸನ: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿರುವ ಎಲ್ಲ ಹಬ್ಬಗಳು ವಿಶೇಷ ಹಾಗೂ ವಿಭಿನ್ನವಾದವುಗಳು. ಇಂತಹ ಹಬ್ಬಗಳ ಆಚರಣೆ, ಮಹತ್ವ ಕುರಿತು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಹೇಳಿದರು.

ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶನಿವಾರ ನಡೆದ ಟೈಮ್ಸ್ ಸುಗ್ಗಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬವು ಉತ್ತರಾಯಣ ಕಾಲದಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ರೈತಾಪಿ ಜನರ ಹಬ್ಬ, ಪೊಂಗಲ್ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಸಂಕ್ರಾಂತಿ ಹಬ್ಬವನ್ನು ಬಹಳ ಸಂತಸದಿಂದ ಜನ ಸಾಮಾನ್ಯರು ಆಚರಿಸುತ್ತಾರೆ ಎಂದರು.

ನಮ್ಮ ಪೂರ್ವಜರ ಐತಿಹ್ಯವನ್ನು ಸಾರುವಂತೆ ಮಾವಿನ ಹಸಿರೆಲೆಯ ತೋರಣ ಹಬ್ಬದ ತೋರ್ ಬೆರಳಿನಂತಿದ್ದು, ಶಾಲಾಂಗಣವನ್ನು ಸಾರಿಸಿ ರಂಗು ರಂಗಿನ ರಂಗವಲ್ಲಿಯಿಂದ, ಭತ್ತ, ರಾಗಿ, ಕಬ್ಬು ಎತ್ತಿನ ಗಾಡಿಗಳನ್ನು ಸಿಂಗರಿಸಿ, ಪೂಜೆಗೆ ಆರತಿ ಸಿದ್ಧಪಡಿಸಿ ಅತ್ಯಂತ ಸಂಭ್ರಮ ಸಡಗರದಿಂದ ಹಬ್ಬದ ಆಚರಣೆ ಮಾಡುತ್ತಾರೆ. ಹೀಗೆ ಹಬ್ಬದ ಆಚರಣೆಯು ಕಲೋಪಾಸನೆಗೆ ಸೌಂದರ್ಯ ಪ್ರಜ್ಞೆಗೂ ಸಾಮಾಜಿಕ ಚೈತನ್ಯದ ಜಾಗೃತಿಗೂ ಸಾಕಷ್ಟು ಎಡೆ ಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡುವಂತಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೈದ್ಯಾಧಿಕಾರಿ ರಾಜಣ್ಣ ಮಾತನಾಡಿ, ಶಾಲೆಗಳಲ್ಲಿ ಇಂತಹ ಹಬ್ಬಗಳ ಆಚರಣೆಗಳಿಂದ ವಿದ್ಯಾರ್ಥಿಗಳು ತಮ್ಮ ಕಲೆ ಸಂಸ್ಕೃತಿಯನ್ನು ಮರೆಯದಂತೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪೋಷಕ ವೃಂದ, ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.