ಜಿಲ್ಲೆ

‘ವಿ ಸ್ಟ್ಯಾಂಡ್ ವಿತ್ ಪ್ರತಾಪ್‌ಸಿಂಹ’ ಚಳವಳಿ: ಸಂಸದರ ಬೆಂಬಲಕ್ಕೆ ನಿಂತ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರನ್ನು ದುರುದ್ದೇಶಪೂರ್ವಕವಾಗಿ ಹಾಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಾಪ್ ಸಿಂಹ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರು ಶನಿವಾರ ‘ವಿ ಸ್ಟಾೃಂಡ್ ವಿತ್ ಪ್ರತಾಪ್‌ಸಿಂಹ’ ಚಳವಳಿ ನಡೆಸಿದರು.

ನಗರದ ಜಲದರ್ಶಿನಿ ಆವರಣದ ಸಂಸದ ಕಚೇರಿ ಮುಂಭಾಗ ಜಮಾವಣೆಗೊಂಡ ಅವರು, ಸಂಸದ ಪ್ರತಾಪ್‌ಸಿಂಹ ಹಾಗೂ ದೇಶದ ಪರ ನಾನಾ ಘೋಷಣೆ ಕೂಗಿದರು. ‘ವಿ ಸ್ಟ್ಯಾಂಡ್ ವಿತ್ ಪ್ರತಾಪ್ ಸಿಂಹ’ ಹಾಗೂ ಪ್ರತಾಪ್‌ಸಿಂಹ ಛಾಯಾಚಿತ್ರದ ಪೋಸ್ಟರ್ ಪ್ರದರ್ಶಿಸಿ ಬೆಂಬಲ ಸೂಚಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್ ಮಾತನಾಡಿ, ಸಂಸತ್ ಭವನದ ಮೇಲಿನ ದಾಳಿಯನ್ನು ಭಾರತದ ಎಲ್ಲ ನಾಗರಿಕರು ಖಂಡಿಸುತ್ತೇವೆ. ಖಂಡಿಸುವ ವಿಚಾರದಲ್ಲಿ ಮೈಸೂರು ನಾಗರಿಕರು ಮುಂದಿದ್ದಾರೆ. ಆದರೆ, ಪ್ರಕರಣದಲ್ಲಿ ಪ್ರತಾಪ್‌ಸಿಂಹ ಅವರನ್ನು ದುರುದ್ದೇಶಪೂರ್ವಕವಾಗಿ ಹಾಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಾಪ್‌ಸಿಂಹ ಜನ ಸ್ನೇಹಿಯಾಗಿ, ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ತಮ್ಮ ಕಚೇರಿಗೆ ಬಂದ ಪ್ರತಿಯೊಬ್ಬರಿಗೂ ಸ್ಪಂದಿಸುತ್ತಿರುವ ಅವರನ್ನು ಟಾರ್ಗೆಟ್ ಮಾಡುವ ಕೆಲಸ ಮೈಸೂರಿನಲ್ಲಿ ನಡೆಯುತ್ತಿದೆ. ಕೆಲವೊಂದು ದುಷ್ಟ ಶಕ್ತಿಗಳು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಹಾಗಾಗಿ, ಪ್ರತಾಪ್‌ಸಿಂಹ ಅವರ ಅಭಿವೃದ್ಧಿ ಕೆಲಸ, ಅವರ ರಾಷ್ಟ್ರೀಯವಾದಿ ವಿಚಾರಧಾರೆಗಳಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ವಿ ಸ್ಟಾೃಂಡ್ ವಿತ್ ಪ್ರತಾಪ್‌ಸಿಂಹ ಎಂಬ ಕಾರ್ಯಕ್ರಮ ಮಾಡಿದ್ದೇವೆ ಎಂದರು.

ಸಂಸತ್ ಭವನದ ಮೇಲಿನ ದಾಳಿ ಸಂಬಂಧ ತನಿಖೆಯಾಗಬೇಕು ಎಂಬ ಆಗ್ರಹ ಇಡೀ ದೇಶದ ನಾಗರಿಕರದ್ದಾಗಿದೆ. ಅದೇ ರೀತಿ ಸರ್ಕಾರ ತನಿಖೆಯನ್ನು ನಡೆಸುತ್ತಿದೆ. ತನಿಖೆ ಮುಗಿಯುವವರೆಗೂ ಎಲ್ಲರೂ ಸುಮ್ಮನಿರಬೇಕು. ಪಾಸ್ ಕೊಟ್ಟ ವಿಚಾರಕ್ಕೆ ಪ್ರತಾಪ್‌ಸಿಂಹ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ಕೊಡುವುದು, ಭಯೋತ್ಪಾದಕರಂತೆ ಬಿಂಬಿಸುವುದು ಸರಿಯಲ್ಲ. ಅಂತಹರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿಮಾನಿ ಬಳಗದ ಕಿರಣ್ ಜಯರಾಮೇಗೌಡ, ಕಿರಣ್ ಮಾದೇಗೌಡ, ಶ್ರೀನಿವಾಸ್, ಕೃಷ್ಣ, ದಾಮೋದರ್, ಪದ್ಮನಾಬ್, ಹೇಮಂತ್, ಯಶವಂತ್, ಶೇಖರ್, ನಾಗರಾಜು, ಮನೋಹರ್ ಇತರರಿದ್ದರು.