ಚನ್ನಪಟ್ಟಣ: ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ಈ ಸೋಲಿನಿಂದ ನಾನು ಎದೆಗುಂದುವುದಿಲ್ಲ. ನನ್ನ ಮೇಲೆ ಯಾವುದೇ ಕಾರಣಕ್ಕೂ ಅನುಮಾನ ಪಡಬೇಡಿ. ನಾನು ಈ ಕ್ಷೇತ್ರ ಹಾಗೂ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದು ಉಪಚುನಾವಣೆ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ಹೇಳಿದರು.
ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ನಾವು ಸೋತಿದ್ದೀವಿ ಅಷ್ಟೇ, ಸತ್ತಿಲ್ಲ, ಮುಂದಿನ ದಿನಗಳಲ್ಲಿ ಒಟ್ಟಾಗಿ ಹೋರಾಟ ಮಾಡೋಣ. ಈ ಫಲಿತಾಂಶ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೂ, ಕ್ಷೇತ್ರದ 87 ಸಾವಿರಕ್ಕೂ ಹೆಚ್ಚು ಜನ ಮತ ನೀಡಿದ್ದಾರೆ. ಈ ಚುನಾವಣೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ನಿಮ್ಮ ಜತೆ ನಾನು ಸದಾ ಇರುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದರು.
ಅನುಮಾನ ಪಡಬೇಡಿ!: ಎರಡು ಪಕ್ಷದ ಕಾರ್ಯಕರ್ತರು ಇಡೀ ರಾಜ್ಯ ಸರ್ಕಾರವನ್ನೇ ಎದುರಿಸಿದ್ದೀರಿ. ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳ್ತೇನೆ, ಯಾವುದೇ ಕಾರಣಕ್ಕೂ ನನ್ನ ಮೇಲೆ ಅನುಮಾನ ಪಡಬೇಡಿ. ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೆ. ಕುಮಾರಣ್ಣ ಅವರಿಗೆ ಮೂರು ಬಾರಿ ಆಪರೇಷನ್ ಆದರೂ ಪಕ್ಷ ಉಳಿಸಲು ಹೋರಾಟ ಮಾಡ್ತಿದ್ದಾರೆ. ಅವರ ಏಕಾಂಗಿ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಚನ್ನಪಟ್ಟಣ ತಾಲೂಕು. ನಿಮ್ಮ ಜತೆ ನಿಲ್ಲಬೇಕು ಎಂದು ಸ್ಪರ್ಧೆ ಮಾಡಿದ ನನಗೆ ಅಪರಿಮಿತ ಪ್ರೀತಿ ನೀಡಿದ್ದೀರಿ. ಚುನಾವಣೆಯಲ್ಲಿ ಸೋಲಾಗಿರಬಹುದು. ಆದರೆ, ಅದಕ್ಕಾಗಿ ಬೇಸರವಿಲ್ಲ ಎಂದರು.
ಮನೆಯಲ್ಲಿ ಕೂರುವವನಲ್ಲ!: ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವವನಲ್ಲ. ಮೂರು ಬಾರಿ ಸೋತಿದ್ದರೂ ಎದೆಗುಂದುವುದಿಲ್ಲ. ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣಲ್ಲಿ ನೀರು ಹಾಕಬೇಡಿ. ನಾವು ಸತ್ತಿಲ್ಲ, ಸೋತಿದ್ದೀವಿ ಅಷ್ಟೇ. ನನಗಿನ್ನು 35 ವರ್ಷ. ರಾಜ್ಯದ ಜನತೆಯ ಆಶೀರ್ವಾದ ನಮ್ಮ ಜತೆ ಇದೆ. ಈ ಸರ್ಕಾರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ನಮ್ಮ ತಂದೆಯವರಿಗೆ ಎಂಟು ಬಾರಿ ಅವಕಾಶ ಕೊಟ್ಟಿದ್ದೀರಿ. ನಾನು ಸೋತಿದ್ದೇನೆ ಅಂದಾಕ್ಷಣ ಕೊಟ್ಟಮಾತು ವಾಪಸ್ ಪಡೆಯಲ್ಲ. ಕುಮಾರಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಸಿಕ್ಕಿರೋ ಅವಕಾಶದಲ್ಲಿ ಕೆಲಸ ಮಾಡುತ್ತಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕೆಲಸ ಮಾಡುತ್ತೇವೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಅನಂದಸ್ವಾಮಿ, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಂ, ಗೋವಿಂದನಹಳ್ಳಿ ನಾಗರಾಜು, ಅಜಯ್, ಎಲೆಕೇರಿ ರವೀಶ್, ನೀಡಗೋಡಿ ಬಾಬು ಸೇರಿದಂತೆ ಹಲವರು ಇದ್ದರು.
ನಾಲ್ಕು ಕ್ಷೇತ್ರ ಗೆಲ್ಲೋಣ!
ದೇವೇಗೌಡರ ಮಾರ್ಗದರ್ಶನದಲ್ಲಿ ಈ ಪಕ್ಷವನ್ನು ದಡ ಮುಟ್ಟಿಸೋಣ. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ. 2018ರಲ್ಲಿ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು. ಆ ಕಾಲ ಮತ್ತೆ ಬರಲಿದೆ, ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲು ಕೆಲಸ ಮಾಡೋಣ. ಕುಮಾರಣ್ಣ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೆ, ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಯಾರ ಮೇಲೂ ದೂರುವ ಪ್ರಶ್ನೆ ಇಲ್ಲ. ಎಲ್ಲರ ಮುಖದಲ್ಲಿ ನಗು ಇರಲಿ, ಯಾರೂ ಬೇಸರ ಮಾಡಿಕೊಳ್ಳೋದು ಬೇಡ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ!
ಸಭೆಯ ಆರಂಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಉಪಚುನಾವಣೆಯ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟಿದೆ. ಚುನಾವಣೆ ಹಿಂದಿನ ದಿನ ಹಣ ಬಿಡುಗಡೆ ಮಾಡಿ ಜನರ ದಾರಿ ತಪ್ಪಿಸಿದೆ. ನಿಖಿಲ್ ಮೇಲೆ ಎರಡು ಪಕ್ಷದ ಕಾರ್ಯಕರ್ತರು ಒತ್ತಡ ಹೇರಿ ಸ್ಪರ್ಧೆಗೆ ನಿಲ್ಲಿಸಿದ್ದೆವು. ಆದರೆ, ಕ್ಷೇತ್ರದ ಜನರನ್ನು ಮುಟ್ಟುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ, ಈ ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ ಎಂದರು. ವೇದಿಕೆಯಲ್ಲೇ ರಾಜೀನಾಮೆ ವಾಪಸ್ ಪಡೆಯುವಂತೆ ಜಯಮುತ್ತುಗೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಸಲಹೆ ನೀಡಿದರು. ಈ ಸೋಲಿನ ಹೊಣೆ ಸಾಮೂಹಿಕ ಎಂದರು.