ಬೆಂಗಳೂರು: ಕನ್ನಡದಲ್ಲಿ ವಿಸ್ತಾರವಾದ ಓದುಗ ಲೋಕವಿದೆ. ಆದರೆ, ಅವರನ್ನು ತಲುಪುವ ದಾರಿಯನ್ನು ಕಂಡುಕೊಳ್ಳುವ ಯತ್ನ ಗಂಭೀರವಾಗಿ ಜರುಗಬೇಕಿದೆ ಎಂದು ಸಾಹಿತಿ ವಸುಧೇಂದ್ರ ಹೇಳಿದ್ದಾರೆ.
ಸಪ್ನ ಬುಕ್ಹೌಸ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ "ಪುಸ್ತಕ ಪಟ್ಟಾಂಗ' ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನ "ರೇಷ್ಮೆ ಬಟ್ಟೆ' ಕೃತಿ ಬಂದಾಗ ನಾನು ರಾಜ್ಯದೆಲ್ಲೆಡೆ ಸುತ್ತಾಡಿ ನೇರವಾಗಿ ಓದುಗರನ್ನು ತಲುಪಿದ್ದೇನೆ. ಅವರೊಂದಿಗೆ ನಡೆಸಿದ ಸಂವಾದದ ಬಳಿಕ ಕನ್ನಡ ಪುಸ್ತಕಗಳಿಗೆ ಖಂಡಿತವಾಗಿಯೂ ಒಳ್ಳೆಯ ಭವಿಷ್ಯವಿದೆ ಎನ್ನುವುದನ್ನು ನನಗೆ ಮನದಟ್ಟು ಮಾಡಿದೆ ಎಂದರು.
ಪತ್ರಕರ್ತ ಜಿ.ಎನ್. ಮೋಹನ್ ಮಾತನಾಡಿ, ಕನ್ನಡದಲ್ಲಿ ಮಾರಾಟಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂಚಲನ ಉಂಟಾಗಿದೆ. ಪುಸ್ತಕ ಉತ್ಸವ, ಪುಸ್ತಕ ಸಂತೆಯ ಮುಂದುವರಿಕೆಯಾಗಿ ಚಿತ್ರಸಂತೆ, ಕಡಲೆಕಾಯಿ ಪರಿಷೆಯಂತೆ ಪುಸ್ತಕ ಪರಿಷೆಯನ್ನೂ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಟಿ ಶ್ವೇತಾ ಶ್ರೀವಾಸ್ತವ್ ಮಾತನಾಡಿ, ನನ್ನೊಳಗಿನ ತುಡಿತಗಳೇ ನನ್ನ "ರೆಕ್ಕೆ ಇದ್ದರೆ ಸಾಕೇ' ಕೃತಿಯಲ್ಲಿ ಅಭಿವ್ಯಕ್ತಿಗೊಂಡಿದೆ. ರಂಗಭೂಮಿ&ಸಿನೆಮಾ ಅನುಭವದ ಹಿನ್ನೆಲೆಯಲ್ಲಿ ನಾನು ನನ್ನ ಬದುಕನ್ನು ಶೋಧಿಸಿದ್ದೇನೆ ಎಂದರು. ಸಪ್ನ ಬುಕ್ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ವ್ಯವಸ್ಥಾಪಕ ಆರ್. ದೊಡ್ಡೆಗೌಡ ಇತರರಿದ್ದರು.