ಕೂಡಲಸಂಗಮ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹಿಂದು ಸಂವಿಧಾನ ಜಾರಿಗೆ ತರುತ್ತೇವೆ ಎಂದು ಕೆಲವರು ಹೇಳುತ್ತಿರುವುದು ಖಂಡನೀಯ. ಬಹುತ್ವ ಭಾರತದಲ್ಲಿ ಹಿಂದು ಸಂವಿಧಾನ ಜಾರಿಗೆ ತರಲು ಬಿಡುವುದಿಲ್ಲ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡ ಹಂಡೆವಜೀರ ಸಮಾಜದ 3ನೇ ರಾಜ್ಯಮಟ್ಟದ ಸಮಾವೇಶ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಹಿಂದು ಸಂವಿಧಾನ ಜಾರಿಯಾದರೆ ದೇಶದಲ್ಲಿನ ಜೈನ, ಬೌದ್ಧ, ಕ್ರೈಸ್ತ್, ಮುಸ್ಲಿಂ, ವೀರಶೈವ ಲಿಂಗಾಯತ ಮುಂತಾದ ಧರ್ಮಿಯರು ಎಲ್ಲಿಗೆ ಹೋಗಬೇಕು? ತಾರತಮ್ಯ ಹೋಗಲಾಡಿಸಿ ಸಮಾನತೆ ಹಕ್ಕು ನೀಡಿದ ನಮ್ಮ ಸಂವಿಧಾನ ಬದಲಾವಣೆಗೆ ನಾಡಿನ ಜನ ಅವಕಾಶ ಕೊಡಬಾರದು. ಪ್ರಜಾಪ್ರಭುತ್ವ ನಾಶಕ್ಕೆ ಹೊರಟವರನ್ನು ವಿರೋಧಿಸುವ ಕಾರ್ಯವಾಗಬೇಕು ಎಂದರು.
ನಮ್ಮಲ್ಲಿನ ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿ ನಡೆದರೆ ಸಮಾಜಕ್ಕೆ ಭವಿಷ್ಯ ಇದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಒಡೆಯುವ ಕಾರ್ಯ ಮಾಡದೆ, ಎಲ್ಲರನ್ನು ಬಳಸಿಕೊಂಡು ಧರ್ಮ ಕಟ್ಟುವ ಕಾರ್ಯವಾಗಲಿ. ಹಂಡೆವಜೀರ ಸಮಾಜದ ಹನುಮಪ್ಪ ನಾಯಕನ ಜಯಂತಿಯನ್ನು ಪ್ರತಿ ವರ್ಷ ಏಪ್ರಿಲ್ 9 ರಂದು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು. ಸಮಾಜದ ಟ್ರಸ್ಟ್‌ಗೆ ಸರ್ಕಾರದ ವತಿಯಿಂದ ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯಲ್ಲಿ 10 ಎಕರೆ ಭೂಮಿ ನೀಡಬೇಕು. ರಾಜಕೀಯದಲ್ಲಿ ಸಮಾಜದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಶಿವಾನಂದ ಪಾಟೀಲ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವೀರಶೈವ ಲಿಂಗಾಯತರು ಒಗ್ಗಟ್ಟಾಗಬೇಕಿದೆ. ಹನುಮಪ್ಪ ನಾಯಕನ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇಂದಿನ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ನಮ್ಮ ಸರ್ಕಾರ ಈಡೇರಿಸಲು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.
ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಶಾಸಕರಾದ ವಿಜಯಾನಂದ ಕಾಶಪ್ಪನವರ, ರಾಜುಗೌಡ ಪಾಟೀಲ, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರಿದ್ದರು.