ಜಿಲ್ಲೆ

ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ನಮ್ಮದು

ವಿರಕ್ತಮಠದ ಶ್ರೀ ಶಿವರುದ್ರ ಮಹಾಸ್ವಾಮಿ ಆಭಿಮತ

 ಚನ್ನಪಟ್ಟಣ: ದೇಶದ ಸಂಸ್ಕೃತಿಗೆ ತನ್ನದೆಯಾದ ವಿಶೇಷ ಪರಿಕಲ್ಪನೆಯ ಸ್ಥಾನಮಾನಗಳಿವೆ. ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ನಮ್ಮದು. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿರಕ್ತಮಠದ ಶ್ರೀ ಶಿವರುದ್ರ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಮಹೇಶ್ವರ ಕನ್ವೆನ್ಷನ್ ಹಾಲ್ನಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೌಟುಂಬಿಕ ಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರಸ್ತುತ ನಾವು ನಮ್ಮತನವನ್ನು ಮರೆತ ಕಾರಣ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ. ಸಂಸ್ಕೃತಿ ಸಂಸ್ಕಾರದಿಂದ ನಮ್ಮ ಪರಂಪರೆಯ ಅರಿವಾಗುತ್ತದೆ. ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಯುವಲ್ಲಿ ಹಿರಿಯರು ಸೂಕ್ತ ಸಮಯದಲ್ಲಿ ತಿಳಿವಳಿಕೆ ನೀಡಬೇಕು. ಇಲ್ಲವಾದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಸಂಸ್ಕಾರ ಮರೆತರೆ ಸಂಘರ್ಷಕ್ಕೆ ಹಾದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಮಾತನಾಡಿ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಭಾರತ ವಿಕಾಸ ಪರಿಷದ್ ಸಂಸ್ಥೆ ಸಹಕಾರಿಯಾಗಿದೆ. ಯುವ ಜನಾಂಗ ಈ ಸಂಸ್ಥೆಯ ಸಕ್ರಿಯ ಸದಸ್ಯರಾಗುವುದರೊಂದಿಗೆ ಸಮಾಜಸೇವೆ ಮಾಡುವ ಮೂಲಕ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಅನ್ನ ಕೊಡುವ ರೈತರು ಮತ್ತು ಜೀವ ಕಾಯುವ ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರೂ ದೇಶದ ಸಂಪತ್ತು ಇವರನ್ನು ಭಾರತ ವಿಕಾಸ ಪರಿಷತ್ ಸಂಸ್ಥೆ ಗೌರವಿಸುತ್ತಿರುವುದು ಸಂತಸದಾಯಕ ವಿಚಾರವಾಗಿದೆ ಎಂದರು.

ವೈದ್ಯ ಡಾ.ವೆಂಕಟಪ್ಪ ಮಾತನಾಡಿ, ಇಂದಿನ ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಭಯೋತ್ಪಾದನೆ ಮೂಲಕ ದೇಶವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವುದು ವಿಷಾದದ ಸಂಗತಿ. ಆದರೆ, ಭಾ.ವಿ.ಪ ಸಂಸ್ಥೆ ಸಂಘಟನೆ ಮೂಲಕ ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾ.ವಿ.ಪ ಸೇವಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಕರ್ನಾಟಕ ದಕ್ಷಿಣ ಪ್ರಾಂತ್ಯ ಮಾಜಿ ಅಧ್ಯಕ್ಷ ಅರುಣ್ ಘಾಟಗೆ ನೂತನ ಪದಾಧಿಕಾರಿಗಳಿಗೆ ದಾಯಿತ್ವ ಬೋಧನೆ ನಡೆಸಿಕೊಟ್ಟರು.

ಭಾವಿಪ ದಕ್ಷಿಣ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ನೂತನ ಸದಸ್ಯರಿಗೆ ದಾಯಿತ್ವ ಬೋಧನೆ ನಡೆಸಿಕೊಟ್ಟರು. ನಿಕಟಪೂರ್ವ ಅಧ್ಯಕ್ಷ ಗುರುಮಾದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಹೇಶ್ವರ್, ಭಾವಿಪ ಭಾರತೀಯ ದಕ್ಷಿಣ ಪ್ರಾಂತ್ಯದ ಪದಾಧಿಕಾರಿ ಚಂದ್ರಿಕಾಗಿರೀಶ್, ಭಾ.ವಿ.ಪ ನೂತನ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್), ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್, ಬೆಸ್ಕಾಂ ಶಿವಲಿಂಗಯ್ಯ, ರಾಧಿಕಾ ರವಿಕುಮಾರ್ ಗೌಡ, ಶೈಲಜಾ ಶಿವಾನಂದ ಇದ್ದರು.

ನಿವೃತ್ತ ಯೋಧ ಮತ್ತಿಕೆರೆ ಚಂದ್ರಶೇಖರ್ ಹಾಗೂ ಪ್ರಗತಿಪರ ರೈತ ಹೊನ್ನಾಯಕನಹಳ್ಳಿ ಕೃಷ್ಣಯ್ಯ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಎನ್.ಕಾಡಯ್ಯ ಅವರಿಗೆ ವಿಕಾಸರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.