ಚಿತ್ರದುರ್ಗ: ಅಧಿಕಾರಕ್ಕೆ ಬಂದ ನೂರು ದಿನದೊಳಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಾಲ್ಕು ಗ್ಯಾರಂಟಿ ಜಾರಿಗೊಳಿಸಿ ನುಡಿದಂತೆ ನಡೆದಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೊಂದು ಗ್ಯಾರಂಟಿಯಾದ ಯುವನಿಧಿಯನ್ನು ಡಿಸೆಂಬರ್ ಒಳಗೆ ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲೂ ಜನ ಕಾಂಗ್ರೆಸ್ ಬೆಂಬಲಿಸಿದ್ದು, ಉತ್ತಮ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲು ಫಲಾನುಭವಿಗಳಿಗೆ ನಿಗದಿತ ಮೊತ್ತದಂತೆ 1.8 ಕೋಟಿ ಕಾರ್ಡ್‌ದಾರರಿಗೆ 600 ಕೋಟಿ ರೂ.ಗಿಂತ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿಯನ್ನೇ ವಿತರಿಸಲು ಕ್ರಮವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಪದಾಧಿಕಾರಿಗಳಾದ ಸಂಪತ್‌ಕುಮಾರ್, ಹಾಲಸ್ವಾಮಿ ಇತರರಿದ್ದರು.