ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಲೋಚನೆ, ವಿಚಾರಧಾರೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಕೊಡಿದ್ದರೆ ಇಂದು ನಮ್ಮ ರಾಜ್ಯ ರಾಮರಾಜ್ಯವಾಗುತ್ತಿತ್ತು ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ವೈ.ಎಚ್.ನಾಯಕವಾಡಿ ಸಂಪಾದಿಸಿರುವ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಶ್ರೀ ಜಯಚಾಮರಾಜ ಒಡೆಯರ್ ಕುರಿತ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಹೊಸ ಆಲೋಚನೆಗಳನ್ನು ಮಾಡುವಂತಹ ಅಗತ್ಯವಿಲ್ಲ. ನಾಲ್ವಡಿ ಅವರ ಕಾರ್ಯಕ್ರಮಗಳನ್ನು ಸರಿಯಾಗಿ ಓದಿ, ತಿಳಿದು ಪಾರದರ್ಶಕವಾಗಿ ಹಾಗೂ ಆದರ್ಶವಾಗಿಟ್ಟುಕೊಂಡು ಹೋಗಿದ್ದರೆ ಕರ್ನಾಟಕ ಸುಭಿಕ್ಷವಾಗಿರುತ್ತಿತ್ತು ಎಂದರು.
ಎಲ್ಲ ಸರ್ಕಾರಗಳು ಅವರ ಯೋಜನೆಗಳನ್ನು ಹೊಸ ಕಾರ್ಯಕ್ರಮಗಳಾಗಿ ಜಾರಿಗೆ ತಂದು ಅದನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾಲ್ವಡಿ ಬಗ್ಗೆ ಅಧ್ಯಯನ ಮಾಡಿದರೆ ಈ ಎಲ್ಲ ಕಾರ್ಯಕ್ರಮಗಳನ್ನೂ ನಾಲ್ವಡಿ ಅವರು ಅವರ ಆಡಳಿತ ಅವಧಿಯಲ್ಲೇ ಜಾರಿಗೆ ತಂದಿದ್ದರು ಎಂಬುದು ತಿಳಿಯುತ್ತದೆ ಎಂದು ಜಿಟಿಡಿ ತಿಳಿಸಿದರು.
ಮೈಸೂರಿನಲ್ಲಿರುವ ವಿಶ್ವವಿದ್ಯಾನಿಲಯ, ಆರೋಗ್ಯ ಕ್ಷೇತ್ರ ಹಾಗೂ ಮುಡಾವನ್ನು ಸರ್ಕಾರ ಇಲ್ಲದೆ ಇರುವ ಕಾಲದಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದರು. ಕೈಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ, ಕಲೆ ಸಂಸ್ಕೃತಿ ಸೇರಿದಂತೆ ಎಲ್ಲ ರಂಗದಲ್ಲಿಯೂ ಅವರು ಸಾಧನೆ ಮಾಡಿದ್ದಾರೆ ಎಂದು ದೇವೇಗೌಡ ಬಣ್ಣಿಸಿದರು.
ಚಿಕ್ಕ ವಯಸ್ಸಿನಲ್ಲೇ ಅಧಿಕಾರ: ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿದ್ಯಾರ್ಜನೆ ಮಾಡುತ್ತಿದ್ದ ಸಂದರ್ಭದಲ್ಲೇ ತಂದೆಯನ್ನು ಕಳೆದುಕೊಂಡು ಅತ್ಯಂತ ಕಿರಿಯ (18ನೇ) ವಯಸ್ಸಿನಲ್ಲೇ ರಾಜ್ಯವನ್ನು ಮುನ್ನಡೆಸುವ ಅಧಿಕಾರವನ್ನು ವಹಿಸಿಕೊಂಡಿದ್ದರು ಎಂದರು.
ನಾಯಕವಾಡಿ ಬೇಸರ:
ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷರಾದ ಲೇಖಕ ಪ್ರೊ.ವೈ.ಎಚ್.ನಾಯಕವಾಡಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ ಕೆಲಸಗಳು ಹಾಗೂ ಸಾಧನೆಗಳು ಅಪಾರ. ಆದರೆ ಇವರ ಸಾಧನೆಗಳನ್ನು ಉಲ್ಲೇಖಿಸದ ಬಹುಸಂಖ್ಯಾತ ಆಸ್ಥಾನಿಕ ವಿದ್ವಾಂಸರು ಹಾಗೂ ರಾಷ್ಟ್ರೀಯವಾದಿ ಇತಿಹಾಸಕಾರರು ನ್ಯಾಯವನ್ನು ಒದಗಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಮೈಸೂರಿನ ಇತಿಹಾಸದಲ್ಲಿ ಅವರಿಗೆ ಅನ್ಯಾಯವಾಗಿದೆ. ದಲಿತರ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಅವರನ್ನು ಪ್ರೋತ್ಸಾಹಿಸಿದ್ದರು. ಈ ಕಾರಣಕ್ಕಾಗಿಯೇ ಒಂದು ವರ್ಗದ ಇತಿಹಾಸಕಾರರು, ವಿದ್ವಾಂಸರು ಕರ್ನಾಟಕದ ಇತಿಹಾಸದಲ್ಲಿ ಹಾಗೂ ಮೈಸೂರಿನ ಚರಿತ್ರೆಯನ್ನು ಕಡೆಗಣಿಸಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಸತ್ಯನಾರಾಯಣ, ಕನ್ನಡ ಅಧ್ಯಯ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಪಿ.ಸಿದ್ದಾಶ್ರಮ, ಇತಿಹಾಸ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಸದಾಶಿವ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಎನ್.ಸರಸ್ವತಿ ಇತರರು ಇದ್ದರು.