ಮೈಸೂರು:ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಈ ಗೆಲುವನ್ನು ನಾವು ನಿರೀಕ್ಷೆ ಮಾಡಿದ್ದೇವು. ಮುಂದಿನ ಐದು ವರ್ಷ ಒಡೆಯರ್ ಅವರು ಜನರ ನಡುವೆಯೇ ಇದ್ದು ಕೆಲಸ ಮಾಡಲಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಸಂತಸ ಹಂಚಿಕೊಂಡರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ನಿರೀಕ್ಷೆಯಂತೆ ನಮ್ಮ ಮೈತ್ರಿ ಅಭ್ಯರ್ಥಿ ಯದುವೀರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಯದುವೀರ್ ಅವರನ್ನು ಅರಮನೆಯಿಂದ ಹೊರಗಡೆ ಬರೋದಿಲ್ಲ. ಎಸಿಯಲ್ಲಿರುವವರಿಗೆ ಜನರ ಸಮಸ್ಯೆಗಳು ಗೊತ್ತಿದೆಯಾ? ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದ್ದರು. ಜತೆಗೆ ನಮ್ಮ ಅಭ್ಯರ್ಥಿ ಸೋಲಿಸಲು ಒಕ್ಕಲಿಗ ಕಾರ್ಡ್ ಬಳಸಿದರು. ಆದರೂ, ಪ್ರಬುದ್ಧ ಮತದಾರರು ನಮ್ಮ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಆಶೀರ್ವಾದ ಮಾಡಿರುವುದು ನಮಗೆಲ್ಲ ಸಂತಸವಾಗಿದೆ. ಜತೆಗೆ ಸಿಎಂ ತವರಿನಲ್ಲಿ ಬಿಜೆಪಿ ಸತತ ಮೂರು ಬಾರಿ ಗೆಲುವು ಸಾಧಿಸಿರುವುದು ನಮಗೆಲ್ಲ ಉತ್ಸಾಹ ಹೆಚ್ಚಿಸಿದೆ. ನನ್ನ ಕ್ಷೇತ್ರದಲ್ಲಿ 54 ಸಾವಿರ ಮತಗಳ ಲೀಡ್ ಕೊಟ್ಟಿರುವುದು ನಮಗೆ ಖುಷಿಯಾಗಿದೆ ಎಂದರು.