ಮುಳಗುಂದ: ಸಮೀಪದ ಕಣವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ತಾಪಂ ಮತ್ತು ಹರ್ತಿ ಗ್ರಾಪಂ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ಗುರುವಾರ ಜರುಗಿತು.
ಗ್ರಾಮದಲ್ಲಿನ ಮೂಲಸೌಕರ್ಯಗಳ ಕೊರತೆ, ಶಾಲೆಯಲ್ಲಿನ ಸಮಸ್ಯೆ ಕುರಿತು ವಿದ್ಯಾರ್ಥಿಗಳು ಪ್ರಸ್ತಾಪಿಸಿ ಸಭಿಕರ ಗಮನ ಸೆಳೆದರು.
ಗ್ರಾಮದ ಪ್ರತಿ ಮನೆಗೂ ಶೌಚಗೃಹ ನಿರ್ವಿುಸಬೇಕು, ಗ್ರಾಮದ ಸ್ವಚ್ಛತೆಗೆ ಒತ್ತು ನೀಡಬೇಕು, ಕೆರೆಯನ್ನು ಅಭಿವೃದ್ಧಿಪಡಿಸಬೇಕು, ಗ್ರಾಮದಲ್ಲಿ ಬ್ಯಾಂಕ್ ವ್ಯವಸ್ಥೆ ಕಲ್ಪಿಸಬೇಕು, ಜೂನಿಯರ್ ಕಾಲೇಜ್ ಕಟ್ಟಡ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಸರಮಾಲೆಯನ್ನು ಮಕ್ಕಳು ಸಭೆ ಮುಂದಿಟ್ಟರು.
ಇದಲ್ಲದೆ, ಗ್ರಾಮ ಪಂಚಾಯಿತಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರು ಭಾಷಣ ಮಾಡುವುದನ್ನು ಬಿಟ್ಟು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದೂ ವಿದ್ಯಾರ್ಥಿಗಳು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಸುಶ್ಮಿತಾ ಕುರ್ತಕೋಟಿ ಮಾತನಾಡಿ, ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ವಿುಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಾಧನೆ ಮಾಡಿ ತೋರಿಸುತ್ತಾರೆ’ ಎಂದಳು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಗ್ರಾಪಂ ಪಿಡಿಒ ಶಿವಲೀಲಾ ಅಂಗಡಿ, ಈಗಾಗಾಲೇ ಶಾಲೆಗಳಲ್ಲಿ ಶೌಚಗೃಹ, ಕುಡಿಯುವ ನೀರು, ಸ್ವಚ್ಛತೆ, ಉದ್ಯಾನ ನಿರ್ಮಾಣ ಕುರಿತು ಕ್ರಿಯಾಯೋಜನೆ ಕಳುಹಿಸಿದ್ದು, ಶೀಘ್ರದಲ್ಲಿಯೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಸಿಆರ್ಪಿ ಇಮಾಮ್ಾಬ್ ಗಾಡಗೋಳಿ ಹಾಗೂ ತಾಪಂ ಅಧಿಕಾರಿಗಳು, ಗ್ರಾಮದ ಎಲ್ಲ ಶಾಲೆಯ ಮಕ್ಕಳು, ಶಿಕ್ಷಕರು ಇದ್ದರು. ಸಭೆ ಬಳಿಕ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕ ಆಹಾರ, ತರಕಾರಿಗಳ ಪ್ರದರ್ಶನ, ಕಣವಿ ಗ್ರಂಥಾಲಯದಿಂದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.