ಜಿಲ್ಲೆ

ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳಿಲ್ಲ: ಸ್ವಾಮೀಜಿ ಹೀಗೆ ಹರಿಹಾಯ್ದಿದ್ದು ಯಾರ ಮೇಲೆ?

ಹಾವೇರಿ: ‘‘ರೀ., ನಾವೇನು ನಿಮ್ಮಪ್ಪನ ಮನೆಯ ಆಸ್ತಿ ಕೇಳುತ್ತಿಲ್ಲ. ಸಂವಿಧಾನಬದ್ಧವಾಗಿಯೇ ನಮಗೆ ಮೀಸಲಾತಿ ದೊರೆಯಬೇಕು. ನೀವು ನಮ್ಮ ಕಿವಿ ಮೇಲೆ ಹೂವು ಇಡಲು ಬರಬೇಡಿ’’ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹರಿಹಾಯ್ದಿದ್ದಾರೆ.

‘‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದಾಗಿ ಈ ಮೊದಲೇ ಭರವಸೆ ಕೊಟ್ಟಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆತುಬಿಟ್ಟಿದ್ದಾರೆ. ಬೇಡರ ಶಾಪ ಅಂದ್ರೆ ಸುಮ್ಮನೆ ಅಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರವೂ ಬೇಡರ ಶಾಪದಿಂದಲೇ ಅಧಿಕಾರ ಕಳೆದುಕೊಂಡಿತು. ಇದನ್ನು ಎಲ್ಲ ಅಧಿಕಾರಸ್ಥರೂ ನೆನಪಿಡಬೇಕು’’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘‘ಯಡಿಯೂರಪ್ಪನವರ ಭರವಸೆ ಕೇವಲ ಭರವಸೆಯಾಗಿ ಉಳಿಯಬಾರದು. ಅವರೀಗ ಅಧಿಕಾರದಲ್ಲಿದ್ದಾರೆ. ಭರವಸೆಯನ್ನು ಈಡೇರಿಸಲು ಕೂಡಲೇ ಸಂಪುಟ ಸಭೆ ಕರೆದು ನಮ್ಮ ಬೇಡಿಕೆಗೆ ಒಪ್ಪಿಗೆ ದೊರಕಿಸಿಕೊಡಬೇಕು. ಇಲ್ಲದಿದ್ದರೆ ನಾನು ಅ. 21ರಂದು ಬೆಂಗಳೂರಿನಲ್ಲಿ ಧರಣಿ ಕುಳಿತುಕೊಳ್ಳುತ್ತೇನೆ. ನಮ್ಮ ಸಮುದಾಯದವರು ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಾರೆ’’ ಎಂದು ಎಚ್ಚರಿಕೆ ನೀಡಿದರು.