ಮಂಗಳೂರು: ಅಧಿಕಾರ ಪಡೆಯುವುದು ಬಿಜೆಪಿ ಉದ್ದೇಶವಲ್ಲ. ಅಧಿಕಾರ ಮೂಲಕ ಜನಸೇವೆ ಮಾಡುವುದು ನಮ್ಮ ಆಶಯ. ಅದಕ್ಕಾಗಿ ಗ್ರಾಮ ಪಂಚಾಯಿತಿ ಸಹಿತ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಬೆಳೆಯುತ್ತಿದ್ದು, ಸಂಘಟನೆ ಮೂಲಕ ಮತ್ತೆ ಅಧಿಕಾರ ಪಡೆಯುವುದು ನಮ್ಮ ಗುರಿಯಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಗುರುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆ ಉದ್ಘಾಟಿಸಿದ ಅವರು, ಉಪಚುನಾವಣೆ ಹಾಗೂ ವಿಧಾನಪರಿಷತ್ನ 4 ಸ್ಥಾನಗಳಲ್ಲಿ ಬಿಜೆಪಿ ಭಾರಿ ಅಂತರದ ಜಯ ಸಾಧಿಸಲಿದೆ. ಮನಬಂದಂತೆ ಮಾತನಾಡುತ್ತಿರುವ ಪ್ರತಿಪಕ್ಷದ ನಾಯಕರಿಗೆ ನ.10ರ ಫಲಿತಾಂಶ ಉತ್ತರ ನೀಡಲಿದೆ ಎಂದರು.
2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಡಳಿತ ಪಕ್ಷದ 18 ಸದಸ್ಯರು ಬಿಜೆಪಿಗೆ ಸೇರಿದರು. ಅವರ ಸಹಕಾರದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿಗೆ ಕಡಿಮೆ ಶಕ್ತಿ ಇದ್ದ ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಹಿಂದಿನ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಜತೆಯಾಗಿ ಮಾಡುವ ಸಂಕಲ್ಪ ತಳೆದಿದ್ದೇವೆ. ಎರಡೂವರೆ ವರ್ಷ ಬಳಿಕ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ವುುಕ್ತ ಪಂಚಾಯಿತಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಅನುಮಾನ ಮತ್ತು ಅಪಪ್ರಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಈ ಹಿಂದಿನ ಸೋಲುಗಳಿಂದ ಪಾಠ ಕಲಿತಿಲ್ಲ. ಕಾಂಗ್ರೆಸ್ನವರಿಗೆ ದೇಶದ ಸೇನೆ ಬಗ್ಗೆಯೂ ನಂಬಿಕೆ ಇಲ್ಲ. ತಾಯಿಯನ್ನು ನಂಬಲಾರದ ಜನ ಮಾತ್ರ ಸೇನೆಯನ್ನು ನಂಬದೇ ಇರಲು ಸಾಧ್ಯ. ಇಂತಹ ಕೆಟ್ಟ ಪ್ರವೃತ್ತಿಯ ಕಾಂಗ್ರೆಸ್ಗೆ ಇಂದು ಜನತೆ ಸೂಕ್ತ ಉತ್ತರ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗ್ರಾಪಂಗಳನ್ನು ಕೂಡ ಕಾಂಗ್ರೆಸ್ ಮುಕ್ತವಾಗಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯ ಸ್ವರ್ಣ ಯುಗ: ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಾತನಾಡಿ, ಮೋದಿ ಮತ್ತು ಯಡಿಯೂರಪ್ಪ ಅವರ ಆಳ್ವಿಕೆ ಬಿಜೆಪಿಯ ಸ್ವರ್ಣಯುಗವಾಗಿದ್ದು, ರಾಜ್ಯದಲ್ಲಿ ಪಕ್ಷ ಸಂಘಟಿಸುವ ಭಾಗ್ಯ ದೊರೆತಿದೆ. ಸಂಘಟನೆ ಆಧಾರದಲ್ಲಿ ಪ್ರತಿ ಮತಗಟ್ಟೆಯಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿಗೆ ಶಾಶ್ವತ ಭದ್ರ ನೆಲೆ ನೀಡುವುದು ನಮ್ಮ ಮುಂದಿರುವ ಗುರಿ. ಈಗಿನ ಉಪ ಚುನಾವಣೆ ಮಾತ್ರವಲ್ಲ, ಮುಂದಿನ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ. ಗಾ.ಪಂ. ಚುನಾವಣೆಯಲ್ಲಿ ಶೇ.80 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ
ಕರೊನಾ ಲಾಕ್ಡೌನ್ದಿಂದ ರಾಜ್ಯದ ಆರ್ಥಿಕತೆಗೆ ಹಿನ್ನಡೆಯಾಗಿತ್ತು. ಈಗ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ. ಮಂಗಳೂರು ಸಹಿತ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ವಿಕಾಸ್ ಯೋಜನೆಯಡಿ 125 ಕೋಟಿ ರೂ.ವರೆಗೆ ಅಭಿವೃದ್ಧಿಗೆ ವಿನಿಯೋಗ ಮಾಡಲು ಪಾಲಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ಕ್ಷೇತ್ರಾಭಿವೃದ್ಧಿಗಾಗಿ ಶಾಸಕರಿಗೆ ಈ ಹಿಂದೆ ತಲಾ 50 ಲಕ್ಷ ರೂ. ಅನುದಾನ ನೀಡಲಾಗಿತ್ತು. ಈಗ ಎರಡನೇ ಕಂತಿನಲ್ಲಿ ತಲಾ 50 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಇನ್ನು 2 ತಿಂಗಳಲ್ಲಿ ಆರ್ಥಿಕ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸ ಇದೆ ಎಂದರು.
ಮುಂದಿನ ಸಭೆ ಬೆಳಗಾವಿಯಲ್ಲಿ
ಮುಂದಿನ ರಾಜ್ಯ ಕಾರ್ಯಕಾರಿಣಿ ಡಿ.5ರಂದು ಬೆಳಗಾವಿಯಲ್ಲಿ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ನಡೆದಂತೆ ಕೋರ್ ಕಮಿಟಿ ಸಭೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮೊದಲು ನ.20ರಂದು ರಾಜ್ಯ ಪದಾಧಿಕಾರಿಗಳ ಸಭೆ ರಾಯಚೂರಿನಲ್ಲಿ ನಡೆಯಲಿದೆ.
ರಾಜ್ಯಸಭೆ ಅಭ್ಯರ್ಥಿ ಪಟ್ಟಿ
ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಕುರಿತು ವಿಸõತ ಚರ್ಚೆಯಾಗಿದೆ, 12 ಮಂದಿ ಹೆಸರು ಚರ್ಚೆಗೆ ಬಂದಿದೆ. ಅದರಲ್ಲಿ 4-5 ಅಂತಿಮಗೊಳಿಸಿ ಅಧ್ಯಕ್ಷರು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಿದ್ದಾರೆ. ಅಂತಿಮ ನಿರ್ಣಯವನ್ನು ಸಮಿತಿಯೇ ತೆಗೆದುಕೊಳ್ಳಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು. ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರ ಕೋರ್ ಕಮಿಟಿಗೆ ವಿಷಯವೇ ಅಲ್ಲ, ಅಂತಹ ಪ್ರಸ್ತಾಪವೂ ಇಲ್ಲ, ಅದೇನಿದ್ದರೂ ಸಿದ್ದರಾಮಯ್ಯ ಹೇಳಿಕೆಗೆ ಸೀಮಿತ ಎಂದು ಸ್ಪಷ್ಟಪಡಿಸಿದರು.
ಬಿಎಸ್ವೈ ಆಡಳಿತಕ್ಕೆ ಮೆಚ್ಚುಗೆ
ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ, 3 ಕೃಷಿ ವಿಧೇಯಕಗಳು ಹಾಗೂ ಬರ-ಪ್ರವಾಹ ಮತ್ತು ಕೋವಿಡ್ ನಿರ್ವಹಣೆಯಲ್ಲಿ ಸಿಎಂ ಯಡಿಯೂರಪ್ಪ ಕಾರ್ಯವೈಖರಿಯನ್ನು ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸ್ವಾಗತಿಸಿ, ನಿರ್ಣಯ ಅಂಗೀಕರಿಸಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ತೆಗೆದು ಕೊಂಡಿರುವ ನಿರ್ಣಯಗಳನ್ನೂ ಕಾರ್ಯಕಾರಿಣಿ ಗಮನಿಸಿದ್ದು, ಅವುಗಳಿಗೂ ಮೆಚ್ಚುಗೆ ಸೂಚಿಸಿದೆ ಎಂದು ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಮಂಗಳೂರಿನಲ್ಲಿ ವಿಶೇಷ ಕಾರ್ಯಕಾರಿಣಿ ಸಭೆ ಅಭೂತ ಪೂರ್ವ ಯಶಸ್ಸು ಕಂಡಿದೆ. 120 ಅಪೇಕ್ಷಿತರಲ್ಲಿ 106 ಮಂದಿ ಭಾಗವಹಿಸಿದ್ದಾರೆ. ಉದ್ಘಾಟನೆಯಿಂದ ಸಮಾರೋಪದವರೆಗೆ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕರಿಸಿದರು ಎಂದರು.
ಬಿಜೆಪಿ ಬಾಗಿಲಲ್ಲಿ 15 ಕೈ ಶಾಸಕರು
ಸ್ವತಃ ಕಾಂಗ್ರೆಸ್ ಶಾಸಕರಿಗೇ ರಕ್ಷಣೆ ಇಲ್ಲ ಎನ್ನುವುದು ಕೆಜಿ ಹಳ್ಳಿ-ಡಿಜೆ ಹಳ್ಳಿ ಘಟನೆಯಿಂದ ಗೊತ್ತಾಗಿದೆ. ಗಲಭೆ ಪ್ರಕರಣದ ರೂವಾರಿ ಸಂಪತ್ರಾಜ್ನನ್ನು ಡಿ.ಕೆ.ಶಿವಕುಮಾರ್ ಬೆಂಬಲಿಸುತ್ತಿದ್ದು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬೆಂಬಲಕ್ಕೆ ಸಿದ್ದರಾಮಯ್ಯ ಇದ್ದಾರೆ. ಆ ಮೂಲಕ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಎನ್ನುವ ವಾತಾವರಣ ನಿರ್ವಣವಾಗಿದೆ. ಆದ್ದರಿಂದಲೇ ಸುಮಾರು 15 ಶಾಸಕರು ಬಿಜೆಪಿ ಬಾಗಿಲಿಗೆ ಬಂದು ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸುದ್ಧಿಗೋಷ್ಠಿಯಲ್ಲಿ ಹೇಳಿದರು.
ನಳಿನ್ ಸಂಘಟನಾ ಶೈಲಿಗೆ ಶ್ಲಾಘನೆ
ನಳಿನ್ಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲ ಜಿಲ್ಲೆಗಳಿಗೆ 3-4 ಬಾರಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲು ವಿಶೇಷ ಪ್ರಯತ್ನ ನಡೆಸಿದ್ದಾರೆ. ನಳಿನ್ ಸಂಘಟನೆಗೆ ಇಷ್ಟೊಂದು ಶಕ್ತಿ ತುಂಬುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಬೇರೆ ಯಾವುದೇ ಪಕ್ಷಕ್ಕೂ ಬಿಜೆಪಿಯನ್ನು ಎದುರಿಸುವ ಶಕ್ತಿ ಇಲ್ಲ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಮಾದರಿಯಲ್ಲೇ ಇಡೀ ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿ ಸಂಘಟನೆ ಬೆಳೆಯಬೇಕು. ಈ ಉದ್ದೇಶಕ್ಕಾಗಿಯೇ ಕಟೀಲ್ ಅವರನ್ನು ಹಿರಿಯರು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದರೆ, ಕರೊನಾ ಸಂಕಷ್ಟದ ನಡುವೆಯೂ ಕಟೀಲ್ ಸತತ ಪ್ರವಾಸ ಮಾಡಿ ಬಿಜೆಪಿ ಚಟುವಟಿಕೆಯಲ್ಲಿ ಇರುವಂತೆ ಮಾಡಿರುವುದು ನಿಜಕ್ಕೂ ಅಭಿನಂದನೀಯ ಎಂದು ಡಿ.ವಿ.ಸದಾನಂದ ಗೌಡ ಪ್ರಶಂಸಿದರು.
ಪ್ಲಾಸ್ಟಿಕ್ ಬದಲು ತಾಮ್ರದ ಲೋಟ ಬಳಕೆ
ಕಾರ್ಯಕಾರಿಣಿಯಲ್ಲಿ ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸಭೆಯಲ್ಲಿ ಪ್ರತಿನಿಧಿಗಳಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕೊಡುವ ಬದಲು ತಾಮ್ರದ ಜಗ್ ಹಾಗೂ ಲೋಟದಲ್ಲೇ ನೀರು ಪೂರೈಸಲಾಯಿತು. ಕರೊನಾ ಹಿನ್ನೆಲೆ ಬಿಸಿ ನೀರು ಬಳಕೆಗೆ ಪೂರಕವಾಗಿ ಇದನ್ನು ಬಳಸಲಾಗಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಪ್ರತಿಕ್ರಿಯಿಸಿದ್ದಾರೆ.