ಜಿಲ್ಲೆ

ನಮ್ಮವರಿಂದಲೇ ಆಪ್ ಒಡೆಯಲು ಪ್ರಯತ್ನ: ಶಿವಕುಮಾರ್ ಗೌಡ

Shivamogga - Desk - Megha MS

ಶಿವಮೊಗ್ಗ: ಬಹಳ ಸಮಯದಿಂದ ನಮ್ಮ ಪಕ್ಷದಲ್ಲೇ ಇದ್ದ ಅನೇಕರು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ಬೇರೆ ರಾಜಕೀಯ ಪಕ್ಷ ಸೇರುವುದು ಅವರ ಉದ್ದೇಶ. ನಮ್ಮ ಪಕ್ಷ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ ಆರೋಪಿಸಿದರು.

ನಾವು ಆಪ್ ತೊರೆಯುತ್ತಿದ್ದೇವೆ ಎಂದು ಕೆಲವರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಆ ಮೂಲಕ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಆಪ್‌ನಲ್ಲಿ ಉಳಿದರೆ ಪ್ರಯೋಜನವಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಚಂದ್ರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಜಿಲ್ಲಾ ಮಟ್ಟದಲ್ಲಿ ಹೊಸ ಪದಾಧಿಕಾರಿಗಳ ನೇಮಕ ಮಾಡಿದ್ದಾರೆ. ಹೊಸ ಪದಾಧಿಕಾರಿಗಳು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಾಗಿದೆ. ಆದರೆ ಈ ನೇಮಕಾತಿ ವಿಷಯ ತಿಳಿಯುತ್ತಿದ್ದಂತೆ ಕೆಲವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು ಎಂದರು.
ಆಪ್ ಮಾಜಿ ಜಿಲ್ಲಾಧ್ಯಕ್ಷ ಕಿರಣ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈ ವಿಷಯವನ್ನು ರಾಜ್ಯ ನಾಯಕರಿಗೆ ತಿಳಿಸಲಾಗಿದೆ. ಶಿಸ್ತುಕ್ರಮ ಅನಿವಾರ್ಯ ಎಂದು ಹೇಳಿದರು.