ಮೈಸೂರು: ದೇಶ ವಿದೇಶಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ, ಆದರೆ ಕನ್ನಡ ನೆಲದಲ್ಲೇ ಕನ್ನಡತನ ಕಳೆದುಕೊಳ್ಳುತ್ತಿದ್ದೇವೆ ಎಂದು ಸಾಹಿತಿ ಮು.ನಾ.ರಮೇಶ ಆತಂಕ ವ್ಯಕ್ತಪಡಿಸಿದರು.
ಬೋಗಾದಿಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಪ್ರಪಂಚದಲ್ಲಿ ಎಲ್ಲೇ ಇದ್ದರೂ ಮರೆಯಬೇಡಿ, ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. ದೇಶ ವಿದೇಶಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.
ಕನ್ನಡಿಗರು ಭಾಷೆಯ ಬಗ್ಗೆ ವಿಶೇಷವಾದ ಪ್ರೀತಿ ಇಟ್ಟುಕೊಳ್ಳಬೇಕು. ಕನ್ನಡ ಬದುಕಿನ ಭಾಷೆಯಾಗಿದ್ದು, ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಕನ್ನಡ ಕವಿಗಳು, ಜಾನಪದವನ್ನು ಓದಬೇಕು ಎಂದ ಅವರು ನಿಮ್ಮ ಬಗ್ಗೆ ತಂದೆ-ತಾಯಿ ಭರವಸೆ ಹಾಗೂ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ನನಸಾಗಿ ಮಾಡಿ ಜೀವನದಲ್ಲಿ ಗುರಿ ಇಟ್ಟುಕೊಂಡು ಬದುಕನ್ನು ಕಟ್ಟಿಕೊಳ್ಳಿರಿ ಎಂದರು.
ನಿಲಯ ಪಾಲಕ ಚಿಕ್ಕೀರಯ್ಯ ಮಾತನಾಡಿ, ಕನ್ನಡ ಸಮೃದ್ಧ ಭಾಷೆ. ಆದರೆ ಕನ್ನಡ ನೆಲದಲ್ಲಿ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದು ಕನ್ನಡ ನೆಲದಲ್ಲಿ ಮಾರ್ವಾಡಿಗಳು, ಗುಜರಾತಿಗಳು, ತುಂಬಿಹೋಗಿದ್ದಾರೆ, ಕೋಮುವಾದಿಗಳು ದೇವರು, ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿದ್ದಾರೆ, ಕನ್ನಡ ನಮ್ಮ ಕಣ- ಕಣದಲ್ಲಿದೆ, ಆದರೆ ಬೇರೆ ಭಾಷೆಗಳನ್ನು ಕಲಿಯಿರಿ, ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬಿಡಬೇಕು ಎಂದರು
ಮೈಸೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ರಮೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಮಹೇಶ್, ನಿಲಯ ಪಾಲಕ ಗುಂಡ್ಲುಪೇಟೆ ಎಸ್. ಮಹೇಶ್ ಇತರರು ಇದ್ದರು.