ಪೊನ್ನಂಪೇಟೆಯ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಗುರುರಾಜ್, ವಿಸ್ಮಯಿ ಚಕ್ರವರ್ತಿ ಇತರರು ಹಾಜರಿದ್ದರು. 
ಜಿಲ್ಲೆ

ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ನಮ್ಮದು

ಗೋಣಿಕೊಪ್ಪ: ಬದಲಾದ ಕಾಲಘಟ್ಟದಲ್ಲಿ ಭಾರತ ದೇಶವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ಹಿಂದುಳಿದಿಲ್ಲ. ಕ್ರೀಡಾಪಟುಗಳು ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಈ ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ದಸರಾ ಕ್ರೀಡಾಕೂಟಕ್ಕೆ ವಿಶೇಷವಾದ ಗೌರವವಿದ್ದು, ಈ ಕ್ರೀಡೆಯಲ್ಲಿ ಹಲವು ಕ್ರೀಡಾಸಕ್ತರು ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ವಿಪುಲ ಅವಕಾಶವಿದೆ. ದಸರಾವು ಈ ದೇಶದ ವಿಶಿಷ್ಟ ಪರಂಪರೆಯಾಗಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಮಾತನಾಡಿ, ಈಗಾಗಲೇ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಮುಕ್ತಾಯಗೊಳಿಸಿದ್ದೇವೆ. ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಮಟ್ಟದ ಕ್ರೀಡೆಯು ನಡೆಯುತ್ತಿದೆ. ಹೆಚ್ಚಿನ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು.

ಮುಂದಿನ ಹಂತದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಯನ್ನು ಹಮ್ಮಿಕೊಳ್ಳಲಾಗುವುದು. ಕೊಡಗು ಜಿಲ್ಲೆಯಲ್ಲಿ ಹಾಕಿ, ಜಿಮ್ನಾಸ್ಟಿಕ್ ಹಾಗೂ ಯೋಗ ಸ್ಪರ್ಧೆಯು ವಿಭಾಗ ಮಟ್ಟದಲ್ಲಿ ನಡೆಯಲಿದೆ. ರಾಜ್ಯ ಮಟ್ಟದ ಸ್ಪರ್ಧೆಯು ಅಕ್ಟೋಬರ್ 13ರಿಂದ 15ರವರೆಗೂ ನಡೆಯಲಿದೆ. 4 ಹಂತದಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ತಾಲೂಕು ಮಟ್ಟದಿಂದ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ದಸರಾ ಕ್ರೀಡಾಕೂಟವು ಎಲ್ಲ ಕ್ರೀಡೆಗಿಂತಲೂ ವಿಭಿನ್ನವಾಗಿದೆ. ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ತರಬೇತುದಾರರಾದ ಕೆ.ಕೆ.ಬಿಂದಿಯ, ಮಂಜುನಾಥ್, ಗಣಪತಿ, ಕುಪ್ಪಂಡ ಸುಬ್ಬಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಥ್ಲೆಟಿಕ್ಸ್ ತರಬೇತುದಾರ ಮಹಾಬಲ, ಅಂತೋಣಿ ಡಿಸೋಜ, ಹಾಕಿ ತರಬೇತುದಾರ ವೆಂಕಟೇಶ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.