ಜಿಲ್ಲೆ

ನಾವೂ ಜೈ ರಾಯಣ್ಣ ಅನ್ನುತ್ತೇವೆ ಸಿದ್ದರಾಮಣ್ಣ, ಸಿಎಂಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಸಂಸದ ಬೊಮ್ಮಾಯಿ

ಹಾವೇರಿ( ಶಿಗ್ಗಾವಿ): ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ- ಸವಣೂರು ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕಟ್ಟಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಆರೋಪಕ್ಕೆ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗೌರವಾನ್ವಿತ ಸಿದ್ದರಾಮಯ್ಯ ಅವರೆ, ನಿನ್ನೆ ನೀವು ಹುಲಗೂರಿನಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ್ದೀರಿ, ಅದು ಹಸಿ ಸುಳ್ಳು, ಇಲ್ಲಿ ನಿಮ್ಮ ಕಣ್ಮುಂದೆ ಇದೆ. 2021-22 ರಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಶಿಗ್ಗಾಂವಿ ತಾಲೂಕಿನ ಹಿರೇ ಮಣಕಟ್ಟಿ ಗ್ರಾಮದಲ್ಲಿ ಸುಮಾರು ಮುನ್ನೂರು ಮನೆಗಳನ್ನು ಕಟ್ಟಿದ್ದೇವೆ. ಬಸವಣ್ಣೆಮ್ಮಾ ಮಾಳಪ್ಪನವರು ಅವರು ಐದು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆಯ ಮೇಲೆ ತಂದೆ- ತಾಯಿ ಆಶೀರ್ವಾದ, ಜೈ ರಾಯಣ್ಣ ಅಂತ ಬರೆಸಿದ್ದಾರೆ.

ಸಿದ್ದರಾಮಣ್ಣ ನಾವೂ ಜೈ ರಾಯಣ್ಣ ಅನ್ನುತ್ತೇವೆ. ನಮ್ಮ ಅಕ್ಕನೂ ಜೈ ರಾಯಣ್ಣ ಎನ್ನುತ್ತಾರೆ. ರಾಯಣ್ಣನಿಗೆ ಜಯವಾಗಿದೆ. ರಾಯಣ್ಣನಿಗೆ ಜೈ ಅಂದಿರುವುದಕ್ಕೆ ಅಕ್ಕಳಿಗೆ ಜಯವಾಗಿದೆ ಎಂದರು.

ನಮ್ಮ ಸರ್ಕಾರ ಇದ್ದಾಗ 2021-22 ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸುಮಾರು 12500 ಮನೆಗಳನ್ನು ಕಟ್ಟಿದ್ದೇವೆ. ಕಟ್ಟಿಸಿರುವ ಮನೆಗಳ ಮುಂದೆ ನಿಂತು ಫೋಟೋ ಕಳುಹಿಸುತ್ತೇನೆ. ನೀವು ಹಸಿ ಸುಳ್ಳು ಹೇಳುವುದನ್ನು ಬಿಡಿ. ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ. ಹಸಿ ಸುಳ್ಳು ಹೇಳಬೇಡಿ. ನಂಬುವಂತಹ ಸುಳ್ಳು ಹೇಳಿ, ನಮ್ಮ ಕೆಲಸಕ್ಕೆ ಪುರಾವೆ ಇಲ್ಲಿದೆ ಎಂದು ಹೇಳಿದರು.

ಕಾಂಗ್ರೆಸ್ ಕೈ ಹಿಡಿದ ನಿಜವಾದ ಶಕುನಿ ಸಿದ್ದರಾಮಯ್ಯ ಹಾವೇರಿ: ರಾಜ್ಯದಲ್ಲಿ ಉಪ ಮುಖ್ಯಮಂತ್ರಿಯನ್ನು ಮಾಡಿ ರಾಜಕೀಯವಾಗಿ ಬೆಳೆಸಿದ ದೇವೇಗೌಡರಿಗೆ ಕೈಕೊಟ್ಟು ನಿರಂತರ ವಿರೋಧಿಸಿರುವ ಕಾಂಗ್ರೆಸ್​ನೊಂದಿಗೆ ಕೈ ಜೋಡಿಸಿರುವ ಸಿಎಂ ಸಿದ್ದರಾಮಯ್ಯ ನಿಜವಾದ ಶಕುನಿ ಎಂದು ರಾಜ್ಯದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೊಮ್ಮಾಯಿ ವಿರುದ್ಧ ಮಾಡಿರುವ ಆರೋಪಕ್ಕೆ ಟ್ವಿಟ್ ಮೂಲಕ ತಿರುಗೇಟು ನೀಡಿರುವ ಅವರು, ಜೆಡಿಎಸ್​ನಿಂದ ಹೊರ ಬಂದಾಗ ಪ್ರಗತಿಪರ ಜನತಾದಳ ಪಕ್ಷದ ಅಡಿಯಲ್ಲಿ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಮಾಡಿ ಅವರ ಅಸ್ತಿತ್ವ ಉಳಿಸಿದ್ದು ಇದೇ ಬಸವರಾಜ ಬೊಮ್ಮಾಯಿ ಎನ್ನುವುದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜತೆಗೆ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. ಅವರು 2006ರಲ್ಲಿ ಜೆಡಿಎಸ್​ಗೆ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಾನು ಯಾವ ರೀತಿ ಸಹಾಯ ಮಾಡಿದ್ದೇನೆ ಎಂದು ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.