ಮೈಸೂರು: ಗುಜರಾತ್ ಸರ್ಕಾರ ಅಲ್ಲಿನ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಮುಂದಾದ ಬೆನ್ನಿಗೇ ಕರ್ನಾಟಕದ ಪಠ್ಯದಲ್ಲೂ ಭಗವದ್ಗೀತೆಯನ್ನು ಸೇರಿಸುವ ಕುರಿತು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಹೀಗೊಂದು ಚಿಂತನೆ ನಡೆಯುತ್ತಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ಕುರಿತು ಬಿಜೆಪಿಯ ಹಲವು ನಾಯಕರು ಸಹಮತ ವ್ಯಕ್ತಪಡಿಸಿ ಬಹಿರಂಗ ಹೇಳಿಕೆ ನೀಡಿದ್ದರೆ, ಕೆಲವು ನಾಯಕರು ನೇರವಾಗಿ ವಿರೋಧ ವ್ಯಕ್ತಪಡಿಸದಿದ್ದರೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಈ ಹಿಂದೆ ಹಾಗೆ ನಕಾರಾತ್ಮಕವಾಗಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರೋಕ್ಷವಾಗಿ ಭಗವದ್ಗೀತೆ ಪರ ಅನಿಸುವಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಚರ್ಚೆ ಅನಗತ್ಯ, ನಮ್ಗೆ ಬೇಕಿರೋದು ಜನ್ರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮ: ಎಚ್ಡಿಕೆ
ಈ ಹಿಂದೆ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೂರದರ್ಶನದ ಮೂಲಕ ಇಡೀ ದೇಶಕ್ಕೆ ರಾಮಾಯಾಣ-ಮಹಾಭಾರತ ಪ್ರಸಾರ ಮಾಡಿದ್ದಾರೆ. ಭಗವದ್ಗೀತೆಯನ್ನು ಬರೀ ಶಿಕ್ಷಣದಲ್ಲಿ ಮಾತ್ರವಲ್ಲ, ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್ ಎಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ನಾವು ಸಹ ಹಿಂದೂಗಳೇ ಎನ್ನುತ್ತ ಭಗವದ್ಗೀತೆಯ ಯದಾ ಯದಾ ಹಿ ಧರ್ಮಸ್ಯ ಎಂಬ ಶ್ಲೋಕವನ್ನೂ ಉಲ್ಲೇಖಿಸಿದ್ದಾರೆ.