ಹೂವಿನಹಿಪ್ಪರಗಿ: ದೇಶಕ್ಕೆ ಅನ್ನ ಬೆಳೆದುಕೊಟ್ಟು ಸಕಲ ಜೀವರಾಶಿಗಳನ್ನು ಬದುಕಿಸುತ್ತಿರುವ ರೈತರ ಜಮೀನುಗಳನ್ನು ಕಬಳಿಸಲು ಸಂಚು ರೂಪಿಸಿರುವ ವಕ್ಪ್ ಬೋರ್ಡ್‌ನ 1974ರ ಗೆಜೆಟ್ ನೋಟಿಫಿಕೇಶನ್ ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ದೇಶದಲ್ಲಿ ವಕ್ಫ್ ಬೋರ್ಡ್‌ನವರಿಗೆ ತಮ್ಮದೆ ಪ್ರತ್ಯೇಕ ಕಾನೂನು ಇದೆಯಂಬ ಅಹಂಭಾವದಿಂದ ತಾವು ಮಾಡಿದ್ದೆ ಮಾರ್ಗವೆಂದು ರೈತರ ಜಮೀನುಗಳನ್ನು ಕಬಳಿಸಲು ಹೊರಟಿದ್ದಾರೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ದಿಟ್ಟ ನಿರ್ಧಾರ ಕೈಗೊಂಡು 1974ರ ಗೆಜೆಟ್ ನೋಟಿಫಿಕೇಶನ್ ರದ್ದು ಗೊಳಿಸಬೇಕು ಎಂದರು.
ಡಾ.ಶಾಲಿನಿ ರಜನೀಶ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರದ ಆದೇಶದಂತೆ ಪಹಣಿಯ ಕಾಲಂ ನಂ.11 ರಲ್ಲಿ ದಾಖಲಾದ ಕರ್ನಾಟಕ ವಕ್ಫ್ ಬೋರ್ಡ್ ಮಸಜೀದ ಸುನ್ನಿ ಎಂದು ದಾಖಲಾಗಿರುವುದನ್ನು ತೆರವುಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.
ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಬಸವರಾಜ ತಾಳಿಕೋಟಿ, ಮಹೇಶ ಸುಬೇದಾರ, ಶ್ರೀಶೈಲ ಮುಳಜಿ, ಸುರೇಶ ಬಿರಾದಾರ, ಲಂಕೇಶ ತಳವಾರ ಇತರರಿದ್ದರು.