ಮೈಸೂರು: ಮಮತಾ ಶ್ರೀಧರ್ ಅವರ ‘ನೆನಪಿನ ಅಲೆಗಳು’ ಕವನ ಸಂಕಲನ ಬಿಡುಗಡೆ ಸಮಾರಂಭ ಶುಕ್ರವಾರ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕಸಾಪ, ಯಶಸ್ವಿನಿ ಮಹಿಳಾ ಜಾಗೃತಿ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪುಸ್ತಕ ಬಿಡುಗಡೆ ಮಾಡಿದರು.
ನೆನಪಿನ ಅಲೆಗಳು ಕವನ ಸಂಕಲನದಲ್ಲಿ ಮಮತಾ ಶ್ರೀಧರ್ ಅವರು ನೋವು-ನಲಿವುಗಳ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ. ನೆನಪಿನ ಅಲೆಗಳು ಕೃತಿ ಹೆಚ್ಚು ರೂಪಕಗಳು, ಕಡಿಮೆ ಉಪಮಾನಗಳನ್ನು ಹೊಂದಿದೆ. ಈ ಕೃತಿಯಲ್ಲಿರುವ ವಿಶಿಷ್ಟವಾದ ಕವಿತೆಗಳು ಸಿಹಿಯಾದ ಅನುಭವವನ್ನು ಕೊಡುತ್ತವೆ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಮಮತಾ ಶ್ರೀಧರ್ ಅವರ ನೆನಪಿನ ಅಲೆಗಳು ಕವನ ಸಂಕಲನ ಮನಮುಟ್ಟುವಂಥದ್ದು ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಜಿ.ಹೊಸಮನಿ ಮಾತನಾಡಿ, ಕರ್ನಾಟಕ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯವನ್ನು ಕರೊನಾ ಸಂದರ್ಭದಲ್ಲಿ ಪ್ರಾರಂಭ ಮಾಡಿದ್ದೇವೆ. ಈವರೆಗೆ 3.80 ಕೋಟಿ ಜನರು ಡಿಜಿಟಲ್ ಗ್ರಂಥಾಲಯಕ್ಕೆ ಆನ್‌ಲೈನ್ ಮೂಲಕ ಸದಸ್ಯರಾಗಿದ್ದಾರೆ. ಲೇಖಕರು ಬರೆದ ಕೃತಿಗಳ ಪ್ರತಿಯನ್ನು ಗ್ರಂಥಾಲಯಕ್ಕೆ ಒದಗಿಸಿದರೆ ಆನ್‌ಲೈನ್ ಮೂಲಕ ಉಚಿತವಾಗಿ ಕೃತಿಯನ್ನು ಓದಲು ಅನುಕೂಲವಾಗುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್, ವೈದ್ಯವಾರ್ತಾ ಪ್ರಕಾಶನ ನಿರ್ದೇಶಕ ಡಾ.ಎಂ.ಜಿ.ಆರ್.ಅರಸ್, ಲೇಖಕಿ ಮಮತಾ ಶ್ರೀಧರ್ ಇದ್ದರು.