ಜಿಲ್ಲೆ

ಕೃಷಿಕರಿಗೆ ಕಹಿಯಾದ ಕಲ್ಲಂಗಡಿ

Udupi

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಶಿರೂರಿನಿಂದ ಹೆಮ್ಮಾಡಿ ತನಕ 150 ಹೆಕ್ಟೇರ್ ಅಧಿಕ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದು, ಮಾರುಕಟ್ಟೆ, ಬೆಲೆ ಏರಿಳಿತ, ಲಾಕ್‌ಡೌನ್ ಸಮಸ್ಯೆ ಜತೆ ಈ ವರ್ಷ ಚಂಡಮಾರುತ ಹೊತ್ತುತಂದ ಮಳೆಯಿಂದಾಗಿ ಹಣ್ಣು ಗದ್ದೆಯಲ್ಲೇ ಕೊಳೆಯುತ್ತಿದೆ.
ಕಿರಿಮಂಜೇಶ್ವರ, ಹೇರೂರು ಕಂಬದಕೋಣೆ ಗ್ರಾಮದಲ್ಲಿ ಬಹುತೇಕ ಕೃಷಿಕರು ಎರಡನೇ ಬೆಳೆಯಾಗಿ ಕಲ್ಲಂಗಡಿ ಬೆಳೆಯುತ್ತಾರೆ. ಈ ಬಾರಿ ಕಟಾವಿನ ಸಂದರ್ಭ ಲಾಕ್‌ಡೌನ್ ಘೋಷಣೆಯಾದ್ದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಹೊರರಾಜ್ಯ ವಹಿವಾಟಿಗೆ ಹೊಡೆತ ಬೀಳುವುದರೊಂದಿಗೆ ಸ್ಥಳೀಯವಾಗಿ ಮಾರಾಟ ಸಾಧ್ಯವಾಗುತ್ತಿಲ್ಲ. ಹೋಟೆಲ್, ಜ್ಯೂಸ್ ಅಂಗಡಿಗಳೂ ಬಂದ್ ಆಗಿರುವುದರಿಂದ ಕಲ್ಲಂಗಡಿ ಕೇಳುವವರಿಲ್ಲ.
ಎರಡು ವರ್ಷಗಳ ಹಿಂದೆ ಈ ಭಾಗದ ಕಲ್ಲಂಗಡಿ ಹಣ್ಣುಗಳಿಗೆ ತಮಿಳುನಾಡು, ಕೇರಳದಲ್ಲಿ ಬಹಳ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ಸಮಸ್ಯೆಯಾಗಿದೆ. ಕಳೆದ ವರ್ಷದ ಹೊಡೆತದಿಂದ ಈ ಬಾರಿಯಾದರೂ ಚೇತರಿಸಿಕೊಳ್ಳುವ ಭರವಸೆಯಿತ್ತು. ಬದಲಿಗೆ ಮತ್ತಷ್ಟು ಸಾಲದ ಹೊರೆ ರೈತರ ಹೆಗಲೇರಿದೆ.
 ಕಲ್ಲಂಗಡಿ ಹಣ್ಣಿಂದ ಜೋನಿ ಬೆಲ್ಲ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಜಯರಾಮ ಶೆಟ್ಟಿ ಎಂಬವರು ಕಲ್ಲಂಗಡಿ ಹಣ್ಣಿನ ರಸದಿಂದ ಬೆಲ್ಲ ತಯಾರಿಸಿ ರೈತರಲ್ಲಿ ಆಶಾಭಾವ ಮೂಡಿಸಿದ್ದಾರೆ. ನಾಲ್ಕು ಎಕ್ರೆಯಲ್ಲಿ ಕಲ್ಲಂಗಡಿ ಬೆಳೆದಿರುವ ಅವರಿಗೆ ಕಳೆದ ವರ್ಷ ಮಾರುಕಟ್ಟೆ ಸಮಸ್ಯೆ ನಷ್ಟವಾಗಿತ್ತು. ಈ ಬಾರಿ ಮತ್ತೆ ಸಮಸ್ಯೆಯಾಗಿ ಗದ್ದೆಯಲ್ಲಿ ಹಾಳಾಗುವ ಸ್ಥಿತಿ ನಿರ್ಮಾಣವಾದಾಗ, ಬೆಳೆಗೆ ಮಾಡಿದ ವೆಚ್ಚವನ್ನಾದರೂ ಗಳಿಸಬೇಕು ಎಂದು ನಿಶ್ಚಯಿಸಿ ಬೆಲ್ಲ ಮಾಡಲು ಮುಂದಾಗಿದ್ದಾರೆ. ಆಲೆಮನೆಯಲ್ಲಿ ಬೆಲ್ಲ ಕಾಯಿಸಿ ಸಿದ್ಧಪಡಿಸುವಂತೆ ಕಲ್ಲಂಗಡಿ ಸಿಪ್ಪೆ ತೆಗೆದು ಕೊಪ್ಪರಿಗೆಯಲ್ಲಿ ಕುದಿಸುವ ಮೂಲಕ ಬೆಲ್ಲ ತೆಗೆಯುವ ಸಾಹಸ ಯಶಸ್ವಿಯಾಗಿದೆ. ಬೆಲ್ಲದ ರುಚಿ ಸವಿದ ಯಕ್ಷಗಾನ ಕಲಾವಿದ ನಿಟ್ಟೂರು ಅನಂತ ಹೆಗಡೆ, ಬೆಲ್ಲ ಜೋನಿಯಾಗಿದ್ದರೂ ರುಚಿ, ಘಮ ಕಬ್ಬಿನ ಬೆಲ್ಲದಂತೆ ಇದೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶವಿದ್ದು, ಅದನ್ನು ಪಶು ಆಹಾರವಾಗಿ ಸಿದ್ಧಪಡಿಸಿದರೆ ರೈತರಿಗೆ ಆದಾಯ ಹೆಚ್ಚುವುದಲ್ಲದೆ, ಪಶುಗಳಿಗೆ ಶುದ್ಧ ಆಹಾರ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಬೈಂದೂರು ಕ್ಷೇತ್ರದ ಬೇರೆ ಬೇರೆ ಕಡೆ ಕಲ್ಲಂಗಡಿ ಕೃಷಿ ಮಾಡಿದ್ದು, ಅಕಾಲಿಕ ಮಳೆಯಿಂದ ಹಣ್ಣು ಕೊಳೆತು ಹಾಳಾಗಿ ಹೋಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಎಲ್ಲೆಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿತ್ತೋ ಅಲ್ಲಿಗೆ ಭೇಟಿ ನೀಡಿ, ಬೆಳೆ ನಷ್ಟದ ಪ್ರಮಾಣದ ವರದಿ ನೀಡುವಂತೆ ಸೂಚಿಸಿದ್ದೇನೆ. ನಷ್ಟವಾದವರಿಗೆ 10 ದಿನಗಳಲ್ಲಿ ಪರಿಹಾರ ನೀಡಲಾಗುತ್ತದೆ.| ಶೋಭಾಲಕ್ಷ್ಮೀ, ತಹಸೀಲ್ದಾರ್, ಬೈಂದೂರು  ಕಳೆದ ಬಾರಿ ಕಲ್ಲಂಗಡಿ ಬೆಳೆ ಕೈಗೆ ಬರುವ ಹೊತ್ತಿಗೆ ಲಾಕ್‌ಡೌನ್ ಬಂದಿದ್ದರೂ ನಮಗೆ ದೊಡ್ಡ ಸಮಸ್ಯೆಯಾಗಲಿಲ್ಲ. ಈ ಬಾರಿ ಕೂಡ ಕಲ್ಲಂಗಡಿ ಬೆಳೆ ಫಲ ಕೊಡುವ ಹೊತ್ತಲ್ಲೇ ಲಾಕ್‌ಡೌನ್ ಆದರೂ ಮಾರುಕಟ್ಟೆ -ಸಾಗಾಟ ಸಮಸ್ಯೆ ದೊಡ್ಡದಾಗಿ ಕಾಡಲಿಲ್ಲ. ದೊಡ್ಡ ಸಮಸ್ಯೆಯಾಗಿದ್ದು ಅಕಾಲಿಕ ಮಳೆ. ಇದರಿಂದ ಹಣ್ಣು ಕೊಳೆತು ಗದ್ದೆಯಲ್ಲಿ ಹಾಳಾಯಿತು. ಬೆಳೆಗಾರರಿಗೆ ಸರ್ಕಾರ ಪರಿಹಾರ ಕೊಡಬೇಕು.| ಉಮೇಶ್, ಕಲ್ಲಂಗಡಿ ಕೃಷಿಕ, ಉಪ್ಪುಂದ