ಜಿಲ್ಲೆ

ವಾಣಿಜ್ಯ ನಗರಿಯ ಕೆರೆಯಲ್ಲಿ ತ್ಯಾಜ್ಯದ ತಾಂಡವ, ಗರಂ ಆದ ಸಚಿವ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ವಾಣಿಜ್ಯ ನಗರಿ ಚಿಂತಾಮಣಿಗೆ ಕುಡಿಯುವ ನೀರಿನ ಮೂಲವಾದ ಕನ್ನಂಪಲ್ಲಿ ಕೆರೆ ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ ತ್ಯಾಜ್ಯದ ರಾಶಿಯನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಗರಂ ಆದರು. ಕೆರೆಯ ಸಂರಕ್ಷಣೆ ಮತ್ತು ಅನೈರ್ಮಲ್ಯವನ್ನು ಕಡೆಗಣಿಸಿದ ನಗರಸಭೆ ಪೌರಾಯುಕ್ತ ರಾಘವೇಂದ್ರ ಗುರುರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಕನ್ನಂಪಲ್ಲಿ ಕೆರೆಯ ಸಮೀಪ ಕಸದ ಜತೆಗೆ ಕೋಳಿ ಪುಕ್ಕ, ಮಾಂಸದ ತುಂಡುಗಳು ಮತ್ತು ಗಲೀಜು, ಗ್ರಾನೈಟ್ ಅಂಗಡಿಗಳಲ್ಲಿ ಕಟ್ಟಿಂಗ್ ಮಾಡಿದ ವೇಸ್ಟ್ ಗ್ರಾನೈಟ್ ಕಲ್ಲುಗಳು, ಕೆಡವಿದ ಕಟ್ಟಡದ ಮಣ್ಣು, ಸಿಮೆಂಟ್ ಮತ್ತು ಇಟ್ಟಿಗೆ ಅವಶೇಷಗಳು ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದಂತೆ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಕೆರೆಯ ಸುತ್ತಲೂ ಅಳವಡಿಸಿರುವ ತಂತಿಯ ಬೇಲಿ ನಾಶ, ತಡೆ ಗೋಡೆ ಕುಸಿತ, ತ್ಯಾಜ್ಯ ಗಿಡಗಳು ಬೆಳೆದಿರುವಿಕೆ, ದುರ್ನಾತದ ಅನೈರ್ಮಲ್ಯ ಕಂಡು ಬಂತು.

ಕನ್ನಂಪಲ್ಲಿ ಕೆರೆಯ ಬಳಿಗೆ ಎಷ್ಟು ಸಲ ಬಂದಿದ್ದೀರಾ? ಕೆರೆಯ ಹಿಂದಿನ ಸ್ಥಿತಿ ಮತ್ತು ಈಗಿನ ಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದೀರಾ? ಎಂದೆಲ್ಲ ಪೌರಾಯುಕ್ತರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಕೆರೆ ಅಭಿವೃದ್ದಿ ಹೆಸರಿನಲ್ಲಿ ಹಣ ಪೋಲು, ರಾಜೀವನಗರ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ರಾಜ ಕಾಲುವೆ ಕಾಮಗಾರಿ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತ್ಯಾಜ್ಯ ಎಸೆಯುವವರಿಗೆ ನೋಟಿಸ್ ನೀಡಲು ಸೂಚಿಸಿದರು.

* ಲಂಚಕ್ಕೆ ನಿರ್ದಾಕ್ಷಿಣ್ಯ ಕ್ರಮ

ಚಿಂತಾಮಣಿ ನಗರಸಭೆಯ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾಗಿರುವ ಹಣ, ಬಾಡಿಗೆ ಬಾಕಿ ಇರುವ ಹಣ, ಹರಾಜು ಕೂಗಿದ ನಂತರ ಡಿಪಾಸಿಟ್ ಹಣ ಪಾವತಿಯ ಲೋಪಗಳನ್ನು ಸಚಿವರು ಪ್ರಶ್ನಿಸಿದರು. ೨೦ ಕ್ಕೂ ಹೆಚ್ಚು ದಿನಗೂಲಿ ಪೌರಕಾರ್ಮಿಕರನ್ನು ಶಾಶ್ವತ ನೌಕರರನ್ನಾಗಿ ನೇಮಿಸಿಕೊಳ್ಳಲು ಲಂಚ ಪಡೆದಿರುವುದಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.