ಜಿಲ್ಲೆ

ಬಿಜೆಪಿ ಅಭ್ಯರ್ಥಿಗೆ ಕೇವಲ ಕಣ್ಣೀರಲ್ಲ, ರಕ್ತ ಕಣ್ಣೀರು ಸಹ ಬರಲಿ

ಚಿಕ್ಕಬಳ್ಳಾಪುರ: ಉಮೇದುವಾರಿಕೆ ಸಲ್ಲಿಕೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಕಣ್ಣೀರು ಹಾಕಿದಕ್ಕೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವರು ಮಾಡಿದ ಕೆಲಸ ಒಂದೋ ಎರಡೋ, ಅವರ ಪಾಪದ ಕೆಲಸಕ್ಕೆ ಕಣ್ಣೀರು ಮಾತ್ರವಲ್ಲ, ರಕ್ತ ಕಣ್ಣೀರನ್ನು ಹಾಕಬೇಕು ಎಂದ ಅವರು, ಸುಧಾಕರ್ ವಿರುದ್ಧ ಜನರಲ್ಲಿ ಅಸೂಯೆ, ದ್ವೇಷ ಇದೆ. ಒಳ್ಳೆಯ ಪಾಠವನ್ನು ಕಲಿಸುತ್ತಾರೆ ಎಂದು ಚಿಕ್ಕಬಳ್ಳಾಪುರ ಭವಿಷ್ಯ ನುಡಿದರು.
ಕಳೆದ ೨೦೧೯ ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ನಾವು ಕೆಟ್ಟೆವು, ಅಷ್ಟೇ ಅಲ್ಲ ಹಿಂದೆ ಎಚ್.ಡಿ.ದೇವೇಗೌಡರನ್ನು ಪ್ರಧಾನಿಯನ್ನಾಗಿಸಿ, ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಿ ಸಹ ಕೆಟ್ಟೇವು. ಈಗ ಜೆಡಿಎಸ್ ಅನ್ನು ಬಿಜೆಪಿ ಸಹ ನಂಬಿದೆ. ಅವರು ಖಚಿತವಾಗಿ ಕೆಡುತ್ತಾರೆ.

*ಭಾವುಕರಾಗಿದ್ದ ಬಿಜೆಪಿ ಅಭ್ಯರ್ಥಿ
ಕಳೆದ ಏ.5 ರಂದು ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಬೃಹತ್ ರೋಡ್ ಶೋನಲ್ಲಿ ಸುಧಾಕರ್ ಕಣ್ಣೀರು ಹಾಕಿ, ಭಾವುಕರಾಗಿದ್ದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರೂ ಸೋಲಿಸಲಾಯಿತು ಎಂಬ ವಿಚಾರವನ್ನು ಪ್ರಸ್ತಾಪಿಸುತ್ತಲೇ ಸುಧಾಕರ್ ಭಾವುಕರಾದರು. ಕಣ್ಣೀರು ಒರೆಸಿಕೊಂಡು, ಕಳೆದ 10 ತಿಂಗಳಿಂದಲೂ ಅಜ್ಞಾತವಾಸದಲ್ಲಿದ್ದೇನೆ. ಏಕೆ ಹೀಗೆ ಮಾಡಿದೀರಿ? ಎಂದು ಅಳುತ್ತಲೇ ಪ್ರಶ್ನಿಸಿದ್ದರು.