ಬಸವರಾಜ ಇದ್ಲಿ ಹುಬ್ಬಳ್ಳಿ
ಅವಳಿ ನಗರದ ಜಲಮೂಲಗಳಲ್ಲಿ ಪ್ರಮುಖವಾದುದು ಉಣಕಲ್ ಕೆರೆ. ಈ ಭಾಗದ ಪ್ರೇಕ್ಷಣಿಯ ಸ್ಥಳ ಕೂಡ. ಇಲ್ಲಿನ ಸೂರ್ಯಾಸ್ತವಂತೂ ನಯನ ಮನೋಹರ. ಸುತ್ತಮುತ್ತಲ ಪ್ರದೇಶಗಳ ಒಳಚರಂಡಿ ಕೊಳಚೆ ಸೇರುವುದನ್ನು ತಡೆಯದ್ದರಿಂದ ಕೆರೆ ಮಲೀನವಾಗುತ್ತಿದೆ. ಈಚೆಗೆ ಪಿಶಾಚಿ ತಾವರೆ ಆವರಿಸಿಕೊಂಡು ಕೆರೆಯ ಸೌಂದರ್ಯವೂ ಹಾಳಾಗುತ್ತಿದೆ. ಕೋಟ್ಯಂತರ ರೂಪಾಯಿ ವ್ಯಯ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಈ ಸಮಸ್ಯೆ ಮುಕ್ತಿ ಕಂಡಿಲ್ಲ. ಈಗ ಮತ್ತೆ ಸ್ವಚ್ಛತೆ ಹಾಗೂ ಸೌಂದರ್ಯೀಕರಣದ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿಗಳನ್ನು ಕೆರೆಯ ನೀರಿಗೆ ಸುರಿಯಲು ಬೃಹತ್ ಯೋಜನೆಯೊಂದು ಸಿದ್ಧಗೊಂಡಿದೆ.
ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್ನವರು ಇಂತಹದೊಂದು ಬೃಹತ್ ಯೋಜನೆ ರೂಪಿಸಿದ್ದಾರೆ. ಮೊದಲ ಹಂತದಲ್ಲಿ ಕೆರೆ ಆವರಿಸಿರುವ ಪಿಶಾಚಿ ತಾವರೆ ನಿಯಂತ್ರಣ ಹಾಗೂ ಕೆರೆ ಸೇರುತ್ತಿರುವ ಒಳಚರಂಡಿ ಕೊಳಚೆ ಬಂದ್ ಮಾಡಲು 14.83 ಕೋಟಿ ರೂ. ವ್ಯಯ ಮಾಡುತ್ತಿದ್ದಾರೆ.
ಇದರ ಟೆಂಡರ್ ಅನ್ನು ಬೆಂಗಳೂರಿನ ಜಿ. ನಾಗೇಂದ್ರ ಅವರಿಗೆ 2020ರ ಆಗಸ್ಟ್ 8ರಂದು ನೀಡಿದ್ದಾರೆ. 2021ರ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ತಿಗೊಳಿಸಲು ಕಾಲಮಿತಿ ವಿಧಿಸಿದ್ದಾರೆ.
ಗುತ್ತಿಗೆದಾರರು ಕೆಲಸ ಆರಂಭಿಸಿ ಐದು ತಿಂಗಳು ಕಳೆದಿವೆ. ಕೆರೆಯಲ್ಲಿ ಸಂಪೂರ್ಣ ಜಲಕಳೆಯನ್ನು ನಿವಾರಣೆ ಮಾಡಿದ್ದಾರೆ. ಆದರೆ, ಕೆರೆ ಸೇರುತ್ತಿರುವ ಕೊಳಚೆ ಬಂದ್ ಮಾಡುವ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ಕೊಳಚೆ ಬಂದ್ ಆಗದ ಹೊರತು ಕೆರೆ ಸ್ವಚ್ಛತಾ ಕಾರ್ಯಕ್ಕೆ ಯಾವುದೇ ಅರ್ಥ ಬರುವುದಿಲ್ಲ ಎಂಬುದು ಪರಿಸರ ತಜ್ಞರ ಅನಿಸಿಕೆಯಾಗಿದೆ.
ಈ ಭಾಗದ ಜನಪ್ರತಿನಿಧಿಗಳು, ಸಚಿವರು ಪ್ರತಿ ಬಾರಿ ಅಧಿಕಾರಿಗಳ ಸಭೆಯಲ್ಲಿ ಮೊದಲು ಕೊಳಚೆಯು ಕೆರೆ ಸೇರುವುದನ್ನು ನಿಲ್ಲಿಸಿ ಎಂದು ಹೇಳುತ್ತಲೇ ಇದ್ದಾರೆ. ಕಳೆದ ತಿಂಗಳಷ್ಟೇ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ ಅವರು ಸಭೆ ನಡೆಸಿದಾಗ, ಕೇವಲ 15 ದಿನಗಳಲ್ಲಿ ಉಣಕಲ್ಲ ಕೆರೆ ಹಾಗೂ ತೋಳನಕೆರೆಗೆ ಸೇರುತ್ತಿರುವ ಕೊಳಚೆ ಬಂದ್ ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಸಚಿವರು ಹೇಳಿ ತಿಂಗಳು ಕಳೆದರೂ ಕೆಲಸ ಪೂರ್ತಿಯಾಗಿಲ್ಲ.
ರೂ. 15 ಲಕ್ಷ ನೀರು ಪಾಲು: ಉಣಕಲ್ಲ ಕೆರೆಯಲ್ಲಿ ಬೆಳೆಯುತ್ತಿರುವ ಜಲಕಳೆ ನಿಯಂತ್ರಣಕ್ಕೆ ಈ ಹಿಂದೆ ನಾಲ್ಕೈದು ಬಾರಿ ಪ್ರಯತ್ನಗಳು ವಿಫಲವಾಗಿವೆ. ಐದಾರು ವರ್ಷಗಳ ಹಿಂದೆ ಮೊದಲ ಬಾರಿಗೆ ಹೈದರಾಬಾದ್ ಮೂಲದ ಕಂಪನಿಯೊಂದು ಜಲಕಳೆ ನಿಮೂಲನೆ ಕೆಲಸ ವಹಿಸಿಕೊಂಡಿತು.ತಿಂಗಳುಗಟ್ಟಲೇ ಗುದ್ದಾಡಿ, ತನ್ನಿಂದಾಗದು ಎಂದು ವಾಪಸ್ ಹೋಯಿತು. ಆಗ ಇದಕ್ಕೆ ವ್ಯಯವಾಗಿದ್ದು 15 ಲಕ್ಷ ರೂ. ತದನಂತರ ಪಾಲಿಕೆಯೇ ದಿನಗೂಲಿ ಕಾರ್ವಿುಕರಿಂದ ಸ್ವಚ್ಛತೆ ಕೈಗೊಂಡಿತು. ಇದು ಸಾಧ್ಯವಾಗದಿದ್ದಾಗ ದೇಶಪಾಂಡೆ ಫೌಂಡೇಶನ್ನವರು ಜೆಸಿಬಿ ಮೂಲಕ ಸಂಪೂರ್ಣ ಕೆರೆಯಲ್ಲಿನ ಜಲಕಳೆ ಕಿತ್ತು ಕೊಟ್ಟಿದ್ದರು. ಆದರೆ, ನಂತರದಲ್ಲಿ ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಮತ್ತೆ ಕಳೆ ವಕ್ಕರಿಸಿತ್ತು. ಇದಾದ ಬಳಿಕ ಉಣಕಲ್ಲ ಅಭಿವೃದ್ಧಿ ಸಂಘದವರು ಸ್ವತಃ ಹಣ ಖರ್ಚು ಮಾಡಿಕೊಂಡು ಶ್ರಮದಾನದ ಮೂಲಕ ವರ್ಷಕಾಲ ಪ್ರಯತ್ನ ಮಾಡಿದರು. ಒಂದು ಹಂತದಲ್ಲಿ ಕಳೆ ಪೂರ್ತಿ ತಹಬಂದಿಗೆ ಬಂದಿತ್ತು. ಆದರೆ, ಕೆಲವೇ ದಿನಗಳಲ್ಲಿ ಜಲಕಳೆ ಮತ್ತೆ ತನ್ನ ಪಿಶಾಚಿ ವರ್ತನೆ ತೋರಿ ಕೆರೆ ಆವರಿಸಿಬಿಟ್ಟಿತು.
ಉಣಕಲ್ ಕೆರೆಯಲ್ಲಿ ಚರಂಡಿ ನೀರು ಸೇರುವುದನ್ನು ತಡೆಯಲು ಹಾಗೂ ಪಿಶಾಚೆ ಕಳೆ ನಿವಾರಿಸಲು ಒಟ್ಟು 14.83 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದರ ಟೆಂಡರ್ ಪಡೆದಿರುವ ಗುತ್ತಿಗೆದಾರರು ಮೊದಲ ಹಂತದಲ್ಲಿ ಕೆರೆಯಲ್ಲಿ ಸಂಪೂರ್ಣ ಕಳೆ ನಿಯಂತ್ರಣಕ್ಕೆ ತಂದಿದ್ದಾರೆ. ಕೆರೆ ಈಗ ಜಲಕಳೆ ಮುಕ್ತವಾಗಿದೆ. ಆದರೆ, ಕೆರೆ ಸೇರುತ್ತಿರುವ ಕೊಳಚೆ ಹಾಗೂ ಅದರ ಜೊತೆ ಬಂದು ಸೇರುವ ಕಳೆಯ ನಿಯಂತ್ರಣ ಸಾಧ್ಯವಾಗಿಲ್ಲ. ಕೊಳಚೆಗೆ ಪರ್ಯಾಯ ಮಾರ್ಗ ತೋರುವ ಕೆಲಸ ನಡೆದಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆ ತೆಗೆದ ನಂತರ ಫ್ಲೋಟಿಂಗ್ ರಾಫ್ಟರ್ (ತೇಲುವ ಜೈವಿಕ ಗಿಡಗಳು) ಬಿಟ್ಟು ಕೆರೆ ನೀರಿನ ಗುಣಮಟ್ಟ ಹೆಚ್ಚಿಸಲಾಗುತ್ತದೆ. ಬಯೋ ರಿಯಾಕ್ಟರ್ ಹಾಕಿ ಜೈವಿಕ ವಿಧಾನದ ಮೂಲಕ ಕೆರೆ ಶುದ್ಧೀಕರಣ ಕಾರ್ಯ ನಡೆಯಲಿದೆ. ಕೆರೆಯಲ್ಲಿನ ಕಳೆ ಪೊದೆಗಳು, ತೇಲುವ ಕಸ ನಿಮೂಲನೆ ಮಾಡಲಾಗುತ್ತದೆ. ಕೊಳಚೆ ಬಂದು ಸೇರುವ ಪ್ರದೇಶದಲ್ಲಿ ಗೋಡೆ (ಗ್ಯಾಬೇನ್ ವಾಲ್) ನಿರ್ವಿುಸಿ ಹೊಲಸು ಒಳಗೆ ಬರದಂತೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ನಂತರದಲ್ಲಿ ಕೆರೆ ನೀರಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಏರೇಟರ್ಸ್, ಫೌಂಟೇನ್ ಅಳವಡಿಕೆ ಕಾರ್ಯ ನಡೆಯಲಿದೆ. ಇದು ಕೆರೆ ನೀರನ್ನು ಸ್ವಚ್ಛ ಗೊಳಿಸಿ ತಿಳಿಯಾಗಿಸಲಿದೆ. ಇದರೊಂದಿಗೆ ಐದು ವರ್ಷಗಳವರೆಗೆ ಕೆರೆ ನಿರ್ವಹಣೆ ಮಾಡುವ ಹೊಣೆಯನ್ನೂ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. 270 ಎಕರೆ ವಿಸ್ತಾರದ ಕೆರೆಯಲ್ಲಿ ಸದ್ಯ ನಿರ್ವಹಣಾ ತಂಡ ಬೋಟ್ ಮೂಲಕ ಸಂಚರಿಸಿ ನಿಗಾ ಇಡುತ್ತಿದೆ. ಎಲ್ಲಿಯಾದರೂ ಕಳೆ ಕಾಣಿಸಿಕೊಂಡರೆ ಕೂಡಲೇ ಕಾರ್ಯಪ್ರವೃತ್ತವಾಗಲಿದೆ.