ಕೆ.ಎಂ.ದೊಡ್ಡಿ: ಕೆಆರ್‌ಎಸ್ ಅಣೆಕಟ್ಟೆ ತುಂಬಿದ್ದರೂ ಕಡೇ ಭಾಗಕ್ಕೆ ಸುಗಮವಾಗಿ ನೀರು ತಲುಪದೆ ರೈತರು ಸಂಕಷ್ಟ ಎದುರಿಸುವಂತಾಯಿತು. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಸಮರ್ಪಕವಾಗಿ ಆಗಿದ್ದರೆ ಇಂದಿನ ಜಲ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು ಎಂದು ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‌ನ ಸಭಾಂಗಣದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ನೀರು ಬಳಕೆದಾರರ ಸಹಕಾರ ಸಂಘಗಳು ಸಕ್ರಿಯವಾಗಿಲ್ಲ. ಇಂತಹ ಸಂಘಗಳನ್ನು ಗುರುತಿಸಿ ಪುನಶ್ಚೇತನಗೊಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ರೈತರ ಸಭೆಗಳನ್ನು ನಡೆಸಿ ನೀರು ಬಳಕೆದಾರರ ಸಹಕಾರ ಸಂಘದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಿ ಸಹಕಾರ ಕೋರಲಾಗುವುದು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಹಕಾರ ಸಂಘಗಳು ನಿಯಮಿತವಾಗಿ ಆಡಳಿತ ಮಂಡಳಿ ಸಭೆಗಳನ್ನು ನಡೆಸಬೇಕು. ನೀರಿನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ರೈತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು, ಸಂಘದ ಚಟುವಟಿಕೆಗಳು ಚಲನಾಶೀಲವಾಗಿದ್ದಲ್ಲಿ ಮಾತ್ರ ನೀರು ಬಳಕೆದಾರರ ಸಹಕಾರ ಸಂಘಗಳ ಸ್ಥಾಪನೆ ಉದ್ದೇಶ ಈಡೇರಲಿದೆ. ಇಲ್ಲದಿದ್ದರೆ, ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ರಾಜ್ಯಸರ್ಕಾರ ಪ್ರತಿ ವರ್ಷ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ 1 ಲಕ್ಷ ರೂ ಕಾರ್ಯಾನುದಾನ ಮತ್ತು ಏಕಕಾಲಿಕ ನಿರ್ವಹಣಾ ಅನುದಾನ ನೀಡುತ್ತಿದೆ. ಆದರೆ, ಈ ಅನುದಾನ ಏನೇನಕ್ಕೂ ಸಾಲದು. ಇದು ಹೆಚ್ಚಳವಾಗಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕೆಆರ್‌ಎಸ್ ಫೆಡರೇಷನ್ ಅಧ್ಯಕ್ಷ ಕೆ.ಎಲ್.ದೊಡ್ಡಲಿಂಗೇಗೌಡ, ಬಿ.ಎನ್.ನಂಜೇಗೌಡ, ಎಚ್.ಕೃಷ್ಣ, ಬಿ.ಎಂ.ರಘು, ವಿ.ಕೆ.ಚನ್ನಬಸವೇಗೌಡ, ಎಚ್.ಡಿ.ಮಹದೇವು, ಸಿಇಒ ಬಿ.ಸುರೇಶ್ ಇತರರಿದ್ದರು.
ಅಕ್ಟೋಬರ್‌ನಲ್ಲಿ ಸಮಾವೇಶಕ್ಕೆ ತೀರ್ಮಾನ
ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಸಮಾವೇಶವನ್ನು ಅಕ್ಟೋಬರ್ ತಿಂಗಳಿನಲ್ಲಿ ಮಂಡ್ಯ ನಗರದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೀರಾವರಿ ಸೌಲಭ್ಯದಡಿ ಎಲ್ಲರಿಗೂ ಸಮಾನ ನೀರು ಹಂಚಿಕೆ, ನೀರು ಪೋಲು ತಪ್ಪಿಸುವುದು, ವಿತರಣಾ ಮತ್ತು ಹೊಲಗಾಲುವೆಗಳ ದುರಸ್ತಿ, ನೀರಿನ ಕರ ವಸೂಲಾತಿ, ಮುಖ್ಯವಾಗಿ ಕೊನೆ ಭಾಗದ ರೈತರಿಗೆ ನೀರು ತಲುಪಿಸುವುದು ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಅಲ್ಲದೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿ ನೀರು ಬಳಕೆದಾರರ ಸಹಕಾರ ಸಂಘಗಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.