ಚಿಕ್ಕೋಡಿ: ಮಳೆಗಾಲದಲ್ಲಿ ಕೃಷ್ಣಾ ನದಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರಿನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಹಿರೇಕೋಡಿ ಗ್ರಾಪಂ ವ್ಯಾಪ್ತಿಯ 450 ಎಕರೆ ಜಮೀನು ನೀರಾವರಿಗೊಳಪಡಲಿವೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ತಾಲೂಕಿನ ಹಿರೇಕೋಡಿ, ಬಾಣಂತಿಖೋಡಿ ಗ್ರಾಮದಲ್ಲಿ ನೀರಾವರಿ ನಿಗಮದ ವತಿಯಿಂದ ಶುಕ್ರವಾರ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ಈ ಭಾಗ ಕೃಷ್ಣಾ ನದಿ ಸಮೀಪ ಇದ್ದರೂ ಅಗತ್ಯವಾಗಿ ಬೇಕಿದ್ದ ನೀರಾವರಿ ಸೌಕರ್ಯ ಇರಲಿಲ್ಲ. ಆ ಸಮಸ್ಯೆ ನಿವಾರಿಸುವ ಹಿನ್ನೆಲೆಯಲ್ಲಿ ಬಡ ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರು ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. ತಾಲೂಕಿನಲ್ಲಿ ನೀರಾವರಿಯಿಂದ ವಂಚಿತರಾದವರಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಮಳೆಗಾಲದಲ್ಲಿ 2 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರು ವ್ಯರ್ಥವಾಗಿ ಸಮುದ್ರ ಪಾಲಾಗುತ್ತಿದೆ. ಆ ನೀರಿನ ಸದ್ಬಳಕೆ ಮಾಡಿಕೊಳ್ಳಲು ನೂತನ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಅಣ್ಣಾಸಾಹೇಬ ಮೊಳಕೆ, ಅರವಿಂದ ಚೌಗಲೆ, ಸುಭಾಷ ಚೌಗಲೆ, ಬಾಪು, ಭರತ ದೇವಡಕರ, ಬಸು ಕರೋಶಿ, ಶ್ರೀಮಂತ ಬಾಪುಗೋಳ, ಸಂತೋಷ ಅಂಗಡೆ, ಗ್ರಾಮಸ್ಥರು ಉಪಸ್ಥಿತರಿದ್ದರು.