ಪ್ಲೊರೈಡ್‌ಯುಕ್ತ ನೀರು ಸೇವನೆ ಮಾರಕ ರೋಗಗಳಿಗೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಪ್ರತಿಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ, ತಾಲೂಕಿನಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಲವಾರು ಕಡೆ ಈ ಘಟಕಗಳು ನಿಷ್ಕ್ರಿಯಗೊಂಡಿವೆ. ಇದಕ್ಕೆ ತಾಲೂಕಿನ ಬಾಣಗಹಳ್ಳಿ ಗ್ರಾಪಂ ಒಂದು ಸೂಕ್ತ ನಿದರ್ಶನವಾಗಿದೆ.
ಜನರ ಆರೋಗ್ಯದ ಹಿತದೃಷ್ಟಿ ಹಾಗೂ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂಬ ಉದ್ದೇಶದಿಂದ ಸರ್ಕಾರದ ವಿವಿಧ ಅನುದಾನಗಳನ್ನು ಬಳಸಿಕೊಂಡು ನಗರ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಆದರೆ, ಕೆಲವು ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆ ಹಾಗೂ ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿ, ಸಾರ್ವಜನಿಕ ಬಳಕೆಗೇ ಬಾರದೆ ಬಾಗಿಲು ಮುಚ್ಚಿವೆ.
ಮುಚ್ಚಿರುವ ಎರಡು ಘಟಕಗಳು!
ಜನರ ಹಿತದೃಷ್ಟಿಯಿಂದ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಬಂಧಿಸಿದವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಹೇಗೆ ಬಲಿಯಾಗುತ್ತವೆ ಎಂಬುದಕ್ಕೆ ತಾಲೂಕಿನ ಬಾಣಗಹಳ್ಳಿ ಗ್ರಾಪಂ ಒಂದು ಉತ್ತಮ ಉದಾಹರಣೆಯಾಗಿದೆ. ಈ ಗ್ರಾಪಂನ ಅಂಬಾಡಹಳ್ಳಿ ಹಾಗೂ ಬಾಣಗಹಳ್ಳಿ ಗ್ರಾಮದಲ್ಲಿ ಜಿಪಂ ಅನುದಾನದಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಎರಡು ಕುಡಿಯುವ ನೀರಿನ ಘಟಕಗಳು ಕೆಟ್ಟು ಎರಡು ವರ್ಷಗಳು ಕಳೆದಿದೆ. ಹೀಗೆ ಕೆಟ್ಟು ನಿಂತಿರುವ ಈ ಘಟಕಗಳನ್ನು ದುರಸ್ತಿ ಮಾಡಿಸಲು ಸಂಬಂಧಿಸಿದವರು ಮೀನಾಮೇಷ ಎಣಿಸುತ್ತಿರುವ ಕಾರಣದಿಂದ ಈ ಎರಡು ಗ್ರಾಮದ ಜನತೆ ಸಮಸ್ಯೆ ಅನುಭವಿಸುವಂತಾಗಿದೆ.
ಅಂಬಾಡಹಳ್ಳಿ ಗ್ರಾಮದ ವಾಡ್೯ ನಂ 2 ನಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದೇ ಪರಿಸ್ಥಿತಿ ಬಾಣಗಹಳ್ಳಿ ಗ್ರಾಮದ್ದೂ ಆಗಿದೆ. ಎರಡು ಗ್ರಾಮದಲ್ಲಿ ಅತಿಹಿಂದುಳಿದ ತಿಗಳ ಸಮುದಾಯವೇ ಗಣನೀಯವಾಗಿ ವಾಸಿಸುತ್ತಿದ್ದು, ಕೆಲವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕದ ನೀರಿಗೆ ಈ ಜನತೆ ಹೊಂದಿಕೊಂಡಿದ್ದಾರೆ.
ಆದರೆ, ಘಟಕಗಳು ಹಠಾತ್ತನೆ ಕಾರ್ಯ ಸ್ಥಗಿತಗೊಳಿಸಿರುವ ಕಾರಣ, ಈ ಎರಡು ಗ್ರಾಮಗಳ ಜನತೆ ಶುದ್ಧ ಕುಡಿಯುವ ನೀರಿಗಾಗಿ ನೆರೆಯ ಮಾದಾಪುರ ಹಾಗೂ ಹಾರೋಕೊಪ್ಪ ಗ್ರಾಮಗಳನ್ನು ಅವಲಂಬಿಸಿಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಜನತೆಯ ಹಿತದೃಷ್ಟಿಯಿಂದ ಲಕ್ಷಾಂತರ ರೂ ವ್ಯಯಿಸಿ ನಿರ್ಮಿಸಿದ ಘಟಕಗಳ ನಿರ್ವಹಣೆ ಯಾರದು ಎಂಬುದೇ ಈ ಎರಡು ಗ್ರಾಮದ ಜನತೆಗೆ ಯಕ್ಷ ಪ್ರಶ್ನೆಯಾಗಿದೆ.
ಜಾರಿಕೊಳ್ಳುತ್ತಿರುವ ಅಧಿಕಾರಿಗಳು!
ಇನ್ನು ಈ ಘಟಕಗಳಿಗೆ ಸಂಬಂಧಿಸಿದ ಗ್ರಾಪಂ ಹಾಗೂ ಆರ್ ಡಿಪಿಆರ್ ( ನೀರು ಮತ್ತು ನೈರ್ಮಲ್ಯ) ವಿಭಾಗದ ಅಧಿಕಾರಿಗಳು ನುಣಿಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಎರಡು ಘಟಕಗಳನ್ನು ಜಿಪಂ ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಅವರೇ ನಿರ್ವಹಣೆ ಸಹ ಮಾಡುತ್ತಿದ್ದರು. ಆದರೆ, ಘಟಕಗಳು ಕೆಟ್ಟ ನಂತರ, ಈ ಘಟಕಗಳ ಬಗ್ಗೆ ಅವರು ಕೈಚೆಲ್ಲಿದ್ದಾರೆ. ಈ ಘಟಕಗಳ ನಿರ್ವಹಣೆ ಅವಧಿ ಮುಕ್ತಾಯಗೊಂಡಿದೆ ಎನ್ನುತ್ತಿದ್ದಾರೆ.
ಇನ್ನು ಈ ಸಮಸ್ಯೆ ಬಗ್ಗೆ ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಈ ಘಟಕಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಘಟಕ ನಿರ್ಮಾಣ ಮಾಡಿದ ಇಲಾಖೆ ನಮಗೆ ಘಟಕವನ್ನು ಸುಪರ್ದಿಗೆ ಕೊಟ್ಟಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳ ಈ ಜಾರಿಕೊಳ್ಳುವ ನಡೆಯಿಂದಾಗಿ, ಸಾರ್ವಜನಿಕರಿಗೆ ಉಪಯೋಗವಾಗಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ ಎರಡು ವರ್ಷಗಳಿಂದ ನಿಷ್ಕ್ರಿಯಗೊಂಡಿವೆ. ಕೂಡಲೇ ಸಂಬಂಧಿಸಿದವರು ಈ ಘಟಕಗಳನ್ನು ದುರಸ್ಥಿಗೊಳಿಸಿ, ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮವಹಿಸಬೇಕಾಗಿದೆ.
ನಮ್ಮ ಅಂಬಾಡಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷ ಕಳೆದಿದೆ. ಗ್ರಾಪಂ ಪಿಡಿಒ ಶ್ರೀಕಾಂತ್ ಈ ಘಟಕ ನಮ್ಮ ಸುಪರ್ದಿಗೆ ಇಲ್ಲ ಎನ್ನುತ್ತಾರೆ. ಜಿಪಂ ಇಂಜಿನಿಯರ್ ಸತ್ಯಪ್ರಕಾಶ್ ನಮ್ಮ ನಿರ್ವಹಣೆ ಅವಧಿ ಮುಗಿದಿದೆ ಎನ್ನುತ್ತಾರೆ. ಇದರಿಂದಾಗಿ ನಮ್ಮ ಜನತೆಗೆ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಈ ನೀರಿಗೆ ಹೊಂದಿಕೊಂಡಿರುವ ಕಾರಣದಿಂದ, ಜನತೆಗೆ ಬೋರ್ ವೆಲ್ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಂಬಂಧಿಸಿದವರು ಈ ಸಮಸ್ಯೆ ಬಗೆಹರಿಸಿಕೊಡಬೇಕು.
ತಿಮ್ಮೇಗೌಡ ಅಂಬಾಡಹಳ್ಳಿ ಗ್ರಾಪಂ ಮಾಜಿ ಸದಸ್ಯ.
ಈ ಘಟಕಗಳನ್ನು ನಮ್ಮ ಗ್ರಾಪಂಗೆ ಸುಪರ್ದಿಗೆ ನೀಡಿಲ್ಲ. ಇದುವರೆಗೂ ಜಿಪಂ ಆರ್ ಡಿಪಆರ್ ಅಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದರು. ಈ ಸಮಸ್ಯೆಗೆ ಸಂಬಂಧಿಸಿದಂತೆ ನಾನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸುಸ್ಥಿತಿಯಲ್ಲಿ ಇದ್ದರೆ ಮಾತ್ರ ನಾವು ಅದನ್ನು ಸುಪರ್ದಿಗೆ ಪಡೆಯಬಹುದಾಗಿದೆ.
ಶ್ರೀಕಾಂತ್, ಬಾಣಗಹಳ್ಳಿ ಗ್ರಾಪಂ ಪಿಡಿಒ.
ಎರಡು ಘಟಕಗಳ ನಿರ್ವಹಣೆಯ ಅವಧಿ ಮುಕ್ತಾಯಗೊಂಡಿದೆ. ಈ ಘಟಕಗಳನ್ನು ನಿಯಮಾನುಸಾರ ಗ್ರಾಪಂ ತಮ್ಮ ಸುಪರ್ದಿಗೆ ಪಡೆಯಬೇಕು. ಕೂಡಲೇ ಈ ಘಟಕಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಇನ್ನೊಂದು ವಾರದಲ್ಲಿ ದುರಸ್ತಿಗೆ ಕ್ರಮವಹಿಸಲಾಗುವುದು.
- ಸತ್ಯಪ್ರಕಾಶ್, ಜಿಪಂ ಇಂಜಿನಿಯರ್.