ಉಪ್ಪಿನಂಗಡಿ: ಬಂಟ್ವಾಳ ತಾಲೂಕಿನ ಪೆರ್ನೆ ಬಳಿ ಸರ್ಕಾರಿ ಯೋಜನೆಯಡಿ ಅನುಷ್ಠಾನಗೊಳಿಸಲಾದ ಕುಡಿವ ನೀರಿನ ಘಟಕವನ್ನೇ ಕಿತ್ತೊಯ್ಯಲು ತಂಡವೊಂದು ಹಾಡಹಗಲಲ್ಲಿ ಪ್ರಯತ್ನ ಮಾಡಿದೆ. ಸ್ಥಳೀಯರು ಎಚ್ಚೆತ್ತ ಕಾರಣ, ಪ್ರಯತ್ನ ವಿಫಲವಾಯಿತು.
ಐದು ವರ್ಷಗಳ ಹಿಂದೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆರೋಗ್ಯಕರ ಜೀವಜಲ ಹೆಸರಿನಲ್ಲಿ ಪೆರ್ನೆ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಅಳವಡಿಸಲಾಗಿತ್ತು. ಒಂದು ರೂ.ನಾಣ್ಯ ಹಾಕಿ ಐದು ಲೀಟರ್ ನೀರು ಪಡೆಯುವ ಯೋಜನೆಯಿದು. ಗುರುವಾರ ಮಧ್ಯಾಹ್ನ ಇಲಾಖೆ ಸಿಬ್ಬಂದಿ ಸೋಗಿನಲ್ಲಿ ಬಂದ ತಂಡ, ನೀರಿನ ಘಟಕವನ್ನೇ ಕಿತ್ತೊಯ್ಯಲು ಪ್ರಯತ್ನಿಸಿದೆ.
ಸಂಶಯಗೊಂಡ ಸ್ಥಳೀಯರು ನೀರಿನ ಘಟಕ ತೆರವು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೀರಿನ ಘಟಕ ಕಿತ್ತೊಯ್ಯಲು ಆಗಮಿಸಿದವರ ವಿರುದ್ಧ ಸ್ಥಳೀಯ ಗ್ರಾಪಂ ದೂರು ನೀಡಲು ಮುಂದಾಗುತ್ತಿದ್ದಂತೆ ತಂಡ ನೀರಿನ ಘಟಕವನ್ನು ಯಥಾಸ್ಥಾನದಲ್ಲಿರಿಸಿ ಸ್ಥಳದಿಂದ ಕಾಲ್ಕಿತ್ತಿದೆ.