ಮಂಡ್ಯ: ಜಿಲ್ಲೆಯ ರೈತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೂಡಲೇ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಿಯೋಗ, ಕೆಆರ್‌ಎಸ್ ಡ್ಯಾಂ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಪ್ರಮುಖ ಬೆಳೆಯಾಗಿರುವ ಭತ್ತದ ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಕೂಡಲೇ ನಾಲೆಗಳಿಗೆ ನೀರು ಹರಿಸಿ ಬೆಳೆದು ನಿಂತಿರುವ ಕಬ್ಬಿನ ಬೆಳೆ ರಕ್ಷಣೆ ಹಾಗೂ ಭತ್ತದ ಬಿತ್ತನೆ ಕಾರ್ಯಕ್ಕೆ ಅನುವು ಮಾಡಿಕೊಡಬೇಕು. ಮಾತ್ರವಲ್ಲದೆ ನೀರು ಬಿಡುವುದರ ಒಳಗೆ ತಕ್ಷಣ ಬಿತ್ತನೆ ಬೀಜವನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಬಿತ್ತನೆ ಬೀಜ ವಿತರಣೆ ಹಾಗೂ ಭತ್ತದ ಬೆಳೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಆಧಾರಿಸಿ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ಹಣದ ಹೊರೆಯಿಂದಾಗಿ ರೈತರು ತೆಂಗು, ಅಡಕೆ, ಕಬ್ಬು ಬೆಳೆಯತ್ತ ಮುಖ ಮಾಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಆಹಾರಕ್ಕಾಗಿ ನೆರೆಯ ರಾಜ್ಯಗಳನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಕೇರಳ ಸರ್ಕಾರದ ಮಾದರಿಯಲ್ಲಿ ಪ್ರತಿ ಕೆ.ಜಿ ಭತಕ್ಕೆ 28.32 ರೂ(ಮಿತಿಯಿಲ್ಲ)ನಂತೆ ಒಂದು ಹೆಕ್ಟೇರ್ ಭತ್ತ ಬೆಳೆಗೆ 2,500 ರೂ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಅದರಂತೆ ರಾಜ್ಯ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು.
ಇನ್ನು ಮೈಷುಗರ್ ಕಾರ್ಖಾನೆಗೆ ಐಎಎಸ್ ಅಧಿಕಾರಿಯನ್ನು ಎಂ.ಡಿ.ಯಾಗಿ ನೇಮಿಸಿರುವುದು ಸ್ವಾಗತಾರ್ಹ. ಆದರೆ ಹಿಂದಿನ ಎಂ.ಡಿ ಆಡಳಿತಾವಧಿಯಲ್ಲಿ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು. ಕಾರ್ಖಾನೆ ಸುಸ್ಥಿತಿಯಲ್ಲಿ ನಡೆಯಲು ಅಗತ್ಯವಾಗಿರುವ ತಾಂತ್ರಿಕ ಸಿಬ್ಬಂದಿ ಜತೆ ರಿಕವರಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಲ್ಲದೆ ರಾಜ್ಯಸರ್ಕಾರ ರದ್ದುಗೊಳಿಸಿರುವ ಎಪಿಎಂಸಿ ಕಾಯ್ದೆ, ಸಬಲೀಕರಣ ಮತ್ತು ರಕ್ಷಣಾ ಕಾಯ್ದೆಯನ್ನು ಮುಂದುವರೆಸುವುದರ ಜತೆಗೆ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಸಂಘದ ರಾಜ್ಯ ಪ್ರಮುಖ ಪಣಕನಹಳ್ಳಿ ವೆಂಕಟೇಶ್, ಜಿಲ್ಲಾ ವಕ್ತಾರ ಗಾಣದಾಳು ನರಸಿಂಹನ್, ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ನಾಗಮಂಗಲ, ಕಾರ್ಯಕಾರಿಣಿ ಸದಸ್ಯರಾದ ಎಚ್.ಎನ್.ರಮೇಶ್, ದಿವ್ಯಾ, ತಾಲೂಕು ಅಧ್ಯಕ್ಷ ಅಪ್ಪಾಜಿ ಇದ್ದರು.