ಪ್ರಭಾಕರ 
ಜಿಲ್ಲೆ

ನೀರು ಬಿಡಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ

Kopala - Desk - Eraveni

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಏ.1ರಿಂದ 10ರವರೆಗೆ ನೀರು ಹರಿಸಲು ಒತ್ತಾಯಿಸಿ ಪಟ್ಟಣದ ಜೆಪಿ ವೃತ್ತದಲ್ಲಿ ಸಂಯುಕ್ತ ಕಿಸಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳಿಂದ ಮಾ.26ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಲೆ ನಂಬಿ ರಾಯಚೂರು, ದೇವದುರ್ಗ, ಲಿಂಗಸುಗೂರು ತಾಲೂಕಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್‌ನಲ್ಲಿ ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಏ.10ರವರೆಗೆ ನೀರು ಹರಿಸಿದರೆ ಮಾತ್ರ ಬೆಳೆಗಳು ಕೈಗೆ ಬರಲಿವೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.25ರವರೆಗೆ ಮಾತ್ರ ನೀರು ಹರಿಸಲು ಅವೈಜ್ಞಾನಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಎರಡು ದಿನ ಅಹೋರಾತ್ರಿ ಧರಣಿ ನಡೆಸಲಾಗುವುದು. ಅಷ್ಟರೊಳಗೆ ಸರ್ಕಾರ ನೀರು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಮೂರನೇ ದಿನ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿ ಹೋರಾಟ ನಡೆಸಲಾಗುವುದು. ರಾಯಚೂರು, ಲಿಂಗಸುಗೂರು, ದೇವದುರ್ಗ ತಾಲೂಕಿನ ಸಾವಿರಾರು ರೈತರು ಭಾಗವಹಿಸಲಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ನೀಡಿದ ಅವೈಜ್ಞಾನಿಕ ವರದಿ ಆಧಾರದಲ್ಲಿ ನೀರು ಬಂದ್ ಮಾಡುವುದಾಗಿ ಸರ್ಕಾರ ತಿಳಿಸಿದೆ ಎಂದರು.

ಜಲಾಶಯದಲ್ಲಿ ನೀರಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರಾತ್ರೋರಾತ್ರಿ ಆಂಧ್ರಕ್ಕೆ 2.5ಟಿಎಂಸಿ ಅಡಿ ನೀರು ಹರಿಸಿದೆ. ಮಾನವೀಯ ದೃಷ್ಟಿಯಿಂದ ನೀರು ಬಿಟ್ಟಿದ್ದೇವೆ ಎನ್ನುತ್ತಾರೆ. ಅದೇ ಮಾನವೀಯ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಿ ಕೊಯ್ನ ಜಲಾಶಯದಿಂದ ನೀರು ಬಿಡಿಸಿಕೊಂಡು ರೈತರಿಗೆ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಸರ್ಕಾರ ನೀರಿನ ವಿಷಯದಲ್ಲಿ ಚೆಲ್ಲಾಟವಾಡುತ್ತಿದೆ. ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನೀಕರಣ ಹಾಗೂ ಉಪಕಾಲುವೆ ನವೀಕರಣ ಕಾಮಗಾರಿ ಕಳಪೆಯಾಗಿದೆ.

ಡ್ಯಾಂನಿಂದ ಪ್ರತಿದಿನ 2400ಸಾವಿರ ಕ್ಯೂಸೆಕ್ ನೀರು ಬಿಟ್ಟರೂ ಟೇಲೆಂಡ್‌ಗೆ ನೀರು ಬರುತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಳ್ಳಾಟದಿಂದ 2700ಕೋಟಿ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ. ನೀರಿನ ವಿಷಯದಲ್ಲೂ ಕಳ್ಳಾಟವಾಡಿದರೆ ಕೋಟ್ಯಂತರ ರೂ. ನಷ್ಟವಾಗಲಿದೆ. ಏ.1ರಿಂದ 10ರವರೆಗೆ ನೀರು ಹರಿಸದಿದ್ದರೆ ರೈತರು ಧಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಮುಖಂಡರಾದ ಬೂದಯ್ಯ ಸ್ವಾಮಿ, ಶರಣಗೌಡ ಬಿ.ಗಣೇಕಲ್, ಉಮಾಪತಿಗೌಡ ಇದ್ದರು.