ಕಾರಟಗಿ ತಾಲೂಕಿನ ಸೋಮನಾಳ ಬಳಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯೆ 31ನೇ ವಿತರಣಾ ಕಾಲುವೆಯ ಜಾಕ್‌ವೆಲ್‌ಗೆ ವಿವಿಧ ಗ್ರಾಮಗಳ ರೈತರು ಭಾನುವಾರ ಸಂಜೆ ದಿಢೀರನೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಬೂದಗುಂಪಾ,ರೈತರಾದ ಬಸವರಾಜ ಕುಲಕರ್ಣಿ, ಕೆ.ವೆಂಕಟೇಶ್ವರರಾವ್, ಸಿದ್ದಲಿಂಗಪ್ಪ ಹಾಲಸಮುದ್ರ, ಲಿಂಗನಗೌಡ ತಿಮ್ಮಾಪುರ, ಭೋಗಪ್ಪ ಈಳಿಗನೂರು ಇತರರಿದ್ದರು. 
ಜಿಲ್ಲೆ

ನೀರು ಹರಿಸುವಂತೆ ಜಾಕ್‌ವೆಲ್‌ಗೆ ಮುತ್ತಿಗೆ

ರುದ್ರಪ್ಪ ವಾಲಿ

ಕಾರಟಗಿ: 31ನೇ ವಿತರಣಾ ಕಾಲುವೆಗೆ ನೀರು ಹರಿಸುವಂತೆ ವಿವಿಧ ಗ್ರಾಮಗಳ ರೈತರು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಜಾಕ್‌ವೆಲ್‌ಗೆ ಭಾನುವಾರ ಸಂಜೆ ದಿಢೀರನೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 88ಟಿಎಂಸಿ ನೀರು ಸಂಗ್ರಹಣೆಯಿದ್ದು ಎಡದಂಡೆ ಕಾಲುವೆಗೆ 3,300ಕ್ಯೂಸೆಕ್ ನೀರು ಹರಿಸಲಾಗಿದೆ. ಮುಖ್ಯಕಾಲುವೆಯ 12ಅಡಿಯಲ್ಲಿ 10ಅಡಿ ನೀರು ಹರಿಯುತ್ತಿದೆ. ಆದರೆ, 10ಅಡಿಯಲ್ಲಿ ನಿಗದಿಯಂತೆ 31ನೇ ವಿತರಣಾ ಕಾಲುವೆಗೆ ನೀರು ಹರಿಸಬೇಕು. ಜಾಕ್‌ವೆಲ್ ಎತ್ತಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಜಲಾಶಯದ ಸಿಇ ಬಸವರಾಜ, ಇಇ ಡಿಬಿ ಗೋಡೆಕಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ, ಗಣೇಕಲ್ ಸಮತೋಲನ ಜಲಾಶಯ ತುಂಬುವವರೆಗೆ ವಿತರಣಾ ಕಾಲುವೆಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ. ಇನ್ನು ಮೂರು ದಿನ ಕಾಯುವಂತೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತರು ವ್ಯಕ್ತಪಡಿಸಿದರು.

ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ, ದೇವಿಕ್ಯಾಂಪ್, ಈಳಿಗನೂರು, ಊಳೇನೂರು, ಯರಡೋಣಾ, ಮರ್ಲಾನಹಳ್ಳಿ, ಕಿಂದಿಕ್ಯಾಂಪ್, ಚಳ್ಳೂರು, ಚಳ್ಳೂರುಕ್ಯಾಂಪ್, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚನ್ನಳ್ಳಿ, ಮಾನಮಡು, ಸಿದ್ರಾಂಪುರ, ಮುಕ್ಕುಂದಾ ಹಾಗೂ ಗಣೇಶಕ್ಯಾಂಪ್‌ನ ನೂರಾರು ಜನ ರೈತರು 31ನೇ ವಿತರಣಾ ಕಾಲುವೆಯ ಜಾಕ್‌ವೆಲ್ ಬಳಿ ಜಮಾವಣೆಗೊಂಡು ಅಧಿಕಾರಿಗಳ ನಡೆಯನ್ನು ಖಂಡಿಸಿದರು.

ಕಾಲುವೆ ಸ್ವಚ್ಛಗೊಳಿಸಿಲ್ಲ

31ನೇ ವಿತರಣಾ ಕಾಲುವೆ ಅಲ್ಲಲ್ಲಿ ರೈತರು ಅಳಿದುಳಿದ ನೀರನ್ನು ಸಂಗ್ರಹಿಸಿಕೊಳ್ಳಲು ಅಲ್ಲಲ್ಲಿ ಮಣ್ಣನ್ನು ಹಾಕಿದ್ದಾರೆ. ಇತ್ತೀಚೆಗೆ ಸಚಿವ ಶಿವರಾಜ ತಂಗಡಗಿ ಕಾಲುವೆಯಲ್ಲಿನ ಮಣ್ಣು ಸ್ವಚ್ಛಗೊಳಿಸಲು 10ಲಕ್ಷ ರೂ.ಗಳನ್ನು ಮಂಜೂರುಗೊಳಿಸುವುದಾಗಿ ತಿಳಿಸಿದ್ದರು. ಇದನ್ನು ಅಧಿಕಾರಿಗಳು ಸಹ ಒಪ್ಪಿಕೊಂಡಿದ್ದಾರೆ. ಆದರೆ, ಇದುವರೆಗೂ ಅಧಿಕಾರಿಗಳು ಮಣ್ಣು ತೆರವುಗೊಳಿಸದೇ ಬೇಜವಾಬ್ದಾರಿತನ ಮೆರೆದಿದ್ದಾರೆ ಎಂದು ರೈತರು ಕಿಡಿ ಕಾರಿದರು.