ಜಿಲ್ಲೆ

ಕೊನೆ ಭಾಗದ ಜಮೀನಿಗೆ ತಲುಪದ ನೀರು

ಕೆ.ಎಂ.ದೊಡ್ಡಿ: ಕೃಷ್ಣರಾಜ ಸಾಗರ ಜಲಾಶಯದಿಂದ ಜು.10 ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ 25 ದಿನಗಳು ಕಳೆದರೂ ಮದ್ದೂರು ತಾಲೂಕಿನ ಕೊನೆ ಭಾಗದ ರೈತರಿಗೆ ನೀರು ತಲುಪಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ರೈತರು ಬರದಿಂದ ತತ್ತರಿಸಿದ್ದರು. ಯಾವುದೇ ಬೆಳೆಗಳು ಕೈಸೆರಿಲ್ಲ. ಈ ಬಾರಿ ಕೆಆರ್‌ಎಸ್ ಭರ್ತಿಯಾಗಿದ್ದು, ತಮಿಳುನಾಡಿಗೆ ಸಾಕಷ್ಟು ನೀರು ಹರಿದಿದೆ. ಆದರೆ ತಾಲೂಕಿನ ಕಡೆ ಭಾಗಕ್ಕೆ ನೀರು ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಕೆಆರ್‌ಎಸ್‌ನಿಂದ ಮೊದಲು ಕೊನೆ ಭಾಗಕ್ಕೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ತಿಳಿಸಿದ್ದರು. ಆದರೂ ಸಹ ಕೊನೆ ಭಾಗಕ್ಕೆ 25 ದಿನಗಳು ಕಳೆದರೂ ನೀರು ತಲುಪಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭೂಮಿ ಹದಗೊಳಿಸುವಿಕೆ, ಒಟ್ಟಲು ಬಿಡಲು ನೀರಿನ ಅವಶ್ಯಕತೆ ಇದ್ದು ಕೂಡಲೇ ನೀರು ಹರಿಸಬೇಕು. ಕೆಆರ್‌ಎಸ್ ಅಣೆಕಟ್ಟಿನಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಹೇಳಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳ ಮತ್ತು ಕೊಡಗಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕನ್ನಂಬಾಡಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆ ಭರ್ತಿಯಾಗಿ ಹಲವು ದಿನಗಳು ಕಳೆದರೂ ಸಹ ಕೆರೆ-ಕಟ್ಟೆಗಳಿಗೆ ನೀರು ತುಂಬಿಸದೆ ಕಾಂಗ್ರೆಸ್ ಸರ್ಕಾರಕ್ಕೆ ಮುಂಜುಗರವಾಗುವಂತೆ ಹೇಳಿಕೆ ನೀಡಿದ್ದಾರೆ. ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದಾಗಿ ಹೇಳಿರುವ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ವರ್ತಿಸುತ್ತ ರೈತರ ಬೆಳೆಗಳಿಗೆ ನೀರು ಬಿಡದೆ ಕಾಲಹರಣ ಮಾಡುತ್ತಿದ್ದಾರೆ. ನದಿಗೆ ನೀರು ಹರಿಸುತ್ತಿದ್ದರೂ ಸಹ ಜಿಲ್ಲೆಯ ರೈತರ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಕಳೆದ ವರ್ಷ ಮಳೆ ಇಲ್ಲದೇ ಕನ್ನಂಬಾಡಿಯಲ್ಲೂ ನೀರಿಲ್ಲದೇ ಬರ ಆವರಿಸಿತ್ತು. ಈ ಬಾರಿ ವರುಣನ ಕೃಪೆಯಿಂದ ಕೆಆರ್‌ಎಸ್ ಭರ್ತಿಯಾಗಿದೆ. ಆದರೆ ನದಿಗೆ ನೀರು ಬಿಡುತ್ತಿರುವ ಅಧಿಕಾರಿಗಳು, ನಾಲೆಗಳಿಗೆ ನೀರು ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಮುಖ್ಯ ಕಾರಣ ರೈತರ ಬೆಳೆ, ಕೆರೆ-ಕಟ್ಟೆಗಳಿಗೆ ನೀರು ಹರಿಸದಿರುವುದೇ ಕಾರಣ. ಆದರೂ ನಾಲೆಗಳಿಗೆ ನೀರು ಹರಿಸದಿರುವ ಅಧಿಕಾರಿಗಳ ಸಂಚು ಏನೆಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.