ರಾಯಚೂರು ನಗರದ ಜನತೆಗೆ ಕುಡಿಯುವ ನೀರನ್ನು ಪರೀಕ್ಷಿಸಲು ಪ್ರತಿಯೊಂದು ವಾರ್ಡ್ ವಾಲ್‌ಮ್ಯಾನ್‌ಗಳು ಮತ್ತು ಸೂಪರ್‌ವೈಸರ್‌ಗಳಿಗೆ ಕ್ಷೇತ್ರ ನೀರು ಪರಿಕ್ಷಾ ಕಿಟ್ ಮೂಲಕ ಪರೀಕ್ಷೆ ಮಾಡುವ ಕುರಿತು ತರಬೇತಿಯನ್ನು ನೀಡಲಾಗುತ್ತಿದೆಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.
ನಗರದ ಮಹಾನಗರ ಪಾಲಿಕೆಯ ವಲಯ ಕಚೇರಿ ಸಭಾಂಗಣದಲ್ಲಿ ಶನಿವಾರ ನೀರು ಸೊರಬರಾಜು ವಿಭಾಗದ ಸಿಬ್ಬಂದಿಗೆ ನೀರು ಪರೀಕ್ಷಾ ಕಿಟ್‌ನ ಪ್ರಾತ್ಯಕ್ಷತೆ ಹಾಗೂ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ನಗರದಲ್ಲಿ ಕುಡಿಯುವ ನೀರು ಪೂರೈಕೆಯ ಕೆಲಸ ಮಾಡುವ ವಾಲ್‌ಮ್ಯಾನ್‌ಗಳಿಗೆ ಹಾಗೂ ನೀರು ವಿಭಾಗದ ಸೂಪರ್‌ವೈಸರ್‌ಗಳಿಗೆ ನೀರಿನ ಪರೀಕ್ಷಾ ವಿಧಾನದ ಬಗ್ಗೆ ತಿಳುವಳಿಕೆ ಬರುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಿಟ್ ಮೂಲಕ ಪರೀಕ್ಷೆ ಮಾಡಿದ್ದಲ್ಲಿ ನೀರಿನ ಗುಣಮಟ್ಟದ ಕುರಿತು ಶೇ.100ರಷ್ಟು ವರದಿ ಬರಲು ಸಾಧ್ಯವಿಲ್ಲ. ಇದರಿಂದ ಅಶುದ್ಧ ನೀರನ್ನು ಪತ್ತೆ ಹಚ್ಚಬಹುದಾಗಿದೆ. ಈ ವರದಿಯನ್ನು ಆಧರಿಸಿ ಪ್ರಯೋಗಾಲಯದಲ್ಲಿ ನೀರನ್ನು ಮರು ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು. ಈ ಕಿಟ್ ಮೂಲಕ ಪಿಎಚ್ ಟೆಸ್ಟ್, ಟಬಿಆರ್‌ಡಿಟಿ ಟೆಸ್ಟ, ರೆಸಿಡ್ಯೂಲ್ ಕ್ಲೋರಿನ್ ಪರೀಕ್ಷೆ, ನೀರಿನ ಗಡಸುತನದ ಪರೀಕ್ಷೆ, ನೀರು ಕಾರತೆ ಪರೀಕ್ಷೆ, ಕ್ಲೋರೈಡ್ ಪರೀಕ್ಷೆ, ನೈಟ್ರೇಟ್ ಪರೀಕ್ಷೆ, ಫೋರೈಡ್ ಪರೀಕ್ಷೆ ಹಾಗೂ ನೀರಿನಲ್ಲಿರುವ ಕಬ್ಬಿಣದ ಅಂಶಗಳ ಪರೀಕ್ಷೆಯಂತಹ 9 ಅಂಶಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ನಗರದಲ್ಲಿ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳಿದ್ದು, ಇದಕ್ಕೆ ಕುಡಿಯುವ ನೀರು ಕೂಡ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲು ಪ್ರತಿಯೊಬ್ಬರು ಪಣ ತೊಡಬೇಕಿದೆ ಎಂದು ಕರೆ ನೀಡಿದರು. ನಂತರ ಕುಡಿಯುವ ನೀರು ಸರಬರಾಜು ಇಲಾಖೆಯ ನೀರು ಪರೀಕ್ಷಾ ತಜ್ಞರಾದ ಚಂದ್ರಿಕಾ ಹಾಗೂ ಯಾಕೂಬ್ ಅವರು ನೀರು ಪರೀಕ್ಷಾ ಕಿಟ್ನನ ಪ್ರಾತ್ಯಕ್ಷಿತೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕುಡಿಯುವ ನೀರು ವಿಭಾಗದ ಅಧಿಕಾರಿ ಮೇನಕಾ ಪಾಟೀಲ್, ಅಧಿಕಾರಿಗಳಾದ ಮಹೇಶ, ರಾಹುಲ್,ಜಯಪಾಲ ರೆಡ್ಡಿ ಸೇರಿದಂತೆ ಪಾಲಿಕೆಯ ನೌಕರರು, ಸಿಬ್ಬಂದಿ ಇದ್ದರು.