ಮಡಿಕೇರಿ:
ನಗರದ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆಟಗಾರರಿಗೆ ಪ್ರಯೋಜನಕಾರಿಯಾಗಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ 1.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಲಾಯಿತು. ರೋಟರಿ ಜಿಲ್ಲೆ 3181ರ ಪ್ರಾಂತಪಾಲ ವಿಕ್ರಂದತ್ತ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ರೋಟರಿ ಸಂಸ್ಥೆ ಜನೋಪಯೋಗಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ. ರೋಟರಿ ವುಡ್ಸ್ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ 120 ವರ್ಷಗಳ ಸುದೀರ್ಘ ಇತಿಹಾಸವನ್ನು ಮನುಕುಲದ ಸೇವೆಯಲ್ಲಿ ಕಳೆದಿರುವ ರೋಟರಿ ಸಂಸ್ಥೆ ಜಗತ್ತಿನಾದ್ಯಂತ ಲಕ್ಷಾಂತರ ಯೋಜನೆಗಳೊಂದಿಗೆ ಮಾನವ ಸೇವೆಗೆ ಮುಂದಾಗಿದೆ. ಕಾರ್ಯಪ್ಪ ಕಾಲೇಜಿನ ಕ್ರೀಡಾಪಟುಗಳಿಗೆ ಅಗತ್ಯವಾದ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ರೋಟರಿ ತನ್ನ ಕಾರ್ಯಯೋಜನೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದರು.
ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇ. ರಾಘವ ಮಾತನಾಡಿ, ಕಾಲೇಜಿನ ಅನೇಕ ಬೇಡಿಕೆಗಳನ್ನು ರೋಟರಿ ಸಂಸ್ಥೆ ಈಡೇರಿಸುವ ಮೂಲಕ ನೈಜವಾದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದೆ. ಹಳ್ಳಿಹಳ್ಳಿಗೂ ರೋಟರಿ ತನ್ನ ಸದಸ್ಯರ ಮೂಲಕ ಸಹಾಯ ಯೋಜನೆ ಕೈಗೊಳ್ಳುವುದರೊಂದಿಗೆ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರು.
ರೋಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್ ಮಾತನಾಡಿ, ಕಾರ್ಯಪ್ಪ ಕಾಲೇಜಿನ ಕ್ರೀಡಾಳುಗಳಿಗೆ ಮೈದಾನದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ರೋಟರಿ ವುಡ್ಸ್ 100 ದಿನಗಳಲ್ಲಿಯೇ ಸದಸ್ಯರು, ಉಪನ್ಯಾಸಕ ವರ್ಗದ ಸಹಕಾರದೊಂದಿಗೆ 1.80 ಲಕ್ಷ ರೂ. ಮೌಲ್ಯದ ಕುಡಿಯುವ ನೀರಿನ ಘಟಕದ ಯೋಜನೆ ಪೂರ್ಣಗೊಳಿಸಿದೆ ಎಂದರು.
ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ದೇವಣಿರ ಕಿರಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಯೋಜನಾ ನಿರ್ದೇಶಕ ರಾಜೇಶ್ ಚೌಧರಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್,ವಸAತ್ ಕುಮಾರ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ರೋಟರಿ ಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.