ಸಂದೀಪ್ ಸಾಲ್ಯಾನ್ ಬಂಟ್ವಾಳ
ಶೌಚಗೃಹ ನಿರ್ಮಿಸಿದ ಬಳಿಕ ಅದಕ್ಕೊಂದು ಶೌಚಗುಂಡಿ ಇರಬೇಕು. ಶೌಚಗೃಹ ಎಷ್ಟೆ ಸುಂದರವಾಗಿ, ಸುಜ್ಜಿತವಾಗಿದ್ದರೂ ಅದಕ್ಕೆ ಶೌಚಗುಂಡಿ ಇಲ್ಲದೇ ಹೋದರೆ ಏನು ಪ್ರಯೋಜನ? ಶೌಚಗುಂಡಿ ಇಲ್ಲದ ನಿಷ್ಟ್ರಯೋಜಕ ಶೌಚಗೃಹವನ್ನು ಕ.ನ.ನೀ.ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಂಟ್ವಾಳದಲ್ಲಿ ನಿರ್ಮಿಸಿದೆ.
ಪುರಸಭಾ ವ್ಯಾಪ್ತಿಯ ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳ ಹಿಂದೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಅದಕ್ಕೆ ಪೂರಕ ಕಾಮಗಾರಿಯಾಗಿ ಕಾಮಾಜೆ ತಿರುವು ಬಳಿ ರೇಚಕ ಸ್ಥಾವರ ನಿರ್ಮಿಸಲಾಗಿದೆ. 24 ಗಂಟೆಯೂ ಇಲ್ಲಿ ಸಿಬ್ಬಂದಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿಂದ ಹಿಂಭಾಗ ಒಂದು ಶೌಚಗೃಹ ನಿರ್ಮಿಸಲಾಗಿದೆ. ವಿಪರ್ಯಾಸ ಎಂದರೆ ಶೌಚಗೃಹಕ್ಕೆ ಗುಂಡಿಯೇ ಇಲ್ಲ. ನೀರಿಗೆ ಪೈಪ್‌ಲೈನ್ ಸಂಪರ್ಕವನ್ನೂ ಕಲ್ಪಿಸಿಲ್ಲ.
ವಿದ್ಯುತ್ ಶಾಕ್: ಪಂಪ್‌ಹೌಸ್‌ನ ಗೇಟ್‌ವಾಲ್‌ಗಳಿಗೆ ಚೇಂಬರ್ ನಿರ್ಮಿಸಲಾಗಿದ್ದು, ಒಳಭಾಗದಲ್ಲಿ ಸೋರಿಕೆಯಾಗುವ ನೀರೆಲ್ಲ ಈ ಚೇಂಬರ್ ಮೂಲಕ ಹೊರಹೋಗುತ್ತದೆ. ಆದರೆ ಹೊರಭಾಗದಲ್ಲಿರುವ ಚೇಂಬರ್‌ನಲ್ಲಿ ಮಳೆ ನೀರು ತುಂಬಿಕೊಂಡು ಒಳಭಾಗದ ನೀರು ಹೊರ ಹೋಗುವ ಬದಲು ಮತ್ತೆ ಒಳಭಾಗದಲ್ಲಿಯೇ ಸಂಗ್ರಹಗೊಳ್ಳುತ್ತಿದೆ. ಇದರಿಂದ ಪಂಪ್‌ಹೌಸ್‌ನ ಒಳಭಾಗದಲ್ಲಿ ಅರ್ಥಿಂಗ್ ಸಮಸ್ಯೆ ಉಂಟಾಗಿ ಪಂಪ್‌ಗಳಲ್ಲೆಲ್ಲ ವಿದ್ಯುತ್ ಸಂಚರಿಸಿ ಶಾಕ್ ಹೊಡೆಯುತ್ತದೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿ ಆತಂಕದಿಂದ ಕೆಲಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಂಡರೆ ಲಕ್ಷಾಂತರ ರೂ. ಮೌಲ್ಯದ ಪಂಪ್ ಮತ್ತಿತರ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿ ಹಾನಿಗೀಡಾಗಲಿವೆ.
ಹಸ್ತಾಂತರ ಗೊಂದಲ: ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಜ್ಯ ನಗರ ನೀರು ಸರಬರಾಜು ಮಂಡಳಿ ಅನುಷ್ಠಾನಗೊಳಿಸಿದರೂ ಬಳಿಕ ಅದರ ನಿರ್ವಹಣೆ ಜವಬ್ದಾರಿ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಬೇಕು. ಬಹುತೇಕ ಕಾಮಗಾರಿಗಳು ಅಪೂರ್ಣವಾಗಿರುವುದರಿಂದ ಅದು ಪೂರ್ಣಗೊಳ್ಳದೆ ನಾವು ನಮ್ಮ ಸುಪರ್ದಿಗೆ ಪಡೆದುಕೊಳ್ಳುವುದಿಲ್ಲ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರೆ, ಮೂರು ವರ್ಷದ ಹಿಂದೆಯೇ ಪುರಸಭೆಗೆ ಹಸ್ತಾಂತರಿಸಿದ್ದೇವೆ ಎಂದು ಒಳಚರಂಡಿ ಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮಿ ತಿಳಿಸುತ್ತಾರೆ. ಒಟ್ಟಿನಲ್ಲಿ ಈ ಹಸ್ತಾಂತರ ಗೊಂದಲ ಬಗೆಹರಿಯದೇ ಈ ಲೋಪದೋಷಗಳನ್ನು ಸರಿಪಡಿಸುವವರು ಯಾರು? ಎನ್ನುವ ಗೊಂದಲ ಸಾರ್ವಜನಿಕರದ್ದು.
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಎಡವಟ್ಟಿನಿಂದಾಗಿ ಈ ಸಮಸ್ಯೆ ನಿರ್ಮಾಣಗೊಂಡಿದೆ. ಮಂಡಳಿ ಅಧಿಕಾರಿಗಳು ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸಿರುವುದಾಗಿ ಹೇಳುತ್ತಾರೆ. ಆದರೆ ಅಪೂರ್ಣ ಕಾಮಗಾರಿಯ ಹಸ್ತಾಂತರ ಪಡೆದುಕೊಳ್ಳುವುದಾದರೂ ಹೇಗೆ? ಡೊಮೆನಿಕ್ ಡಿಮೆಲ್ಲೊ, ಇಂಜಿನಿಯರ್ ಬಂಟ್ವಾಳ ಪುರಸಭೆ