ಚನ್ನರಾಯಪಟ್ಟಣ: ತಾಲೂಕಿನಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಸರ್ಕಾರ ಈಗಾಗಲೇ ಚನ್ನರಾಯಪಟ್ಟಣ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಸರ್ಕಾರ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿದ್ದರೂ ಕುಡಿಯುವ ನೀರಿನ ಟ್ಯಾಂಕರ್‌ಗಳ ಅಲಭ್ಯತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೈ ಕಟ್ಟಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಜನವರಿಯಿಂದ ಈಚೆಗೆ ತಾಲೂಕಿನಾದ್ಯಂತ ಕೊಳವೆಬಾವಿಗಳು ಬತ್ತುತ್ತಿವೆ. ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ 80 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯ ಮಾರಡಿಹಳ್ಳಿ, ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ, ಬಂಡೆಕೆರಿ 4ನೇ ಬ್ಲಾಕ್, ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂವನಹಳ್ಳಿ, ಎಂ.ಸಿದ್ದರಹಟ್ಟಿ, ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲನಘಟ್ಟ, ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಮ್ಮಟನಗರ, ಹಿರೀಸಾವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಮ್ಮಾಪುರ, ಜನತಾ ಕಾಲನಿ, ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮರವಳ್ಳಿ, ಬಾಳಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಲಾಪುರ, ಕಬ್ಬಿನಕೆರೆ, ಎಂ.ಬಿ.ಕಾವಲು, ಡಿ.ಕಾಳೆನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳೆನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹಾಗಾಗಿ ಟ್ಯಾಂಕರ್, ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರೆ (ರೀಬೋರಿಂಗ್) ರೀಚಾರ್ಜ್‌ಗೆ ಕ್ರಮವಹಿಸಲಾಗಿದೆ.
.ಕಳೆದ ಬಾರಿ ಸುರಿದ ಮಳೆಯಿಂದಾಗಿ ಹಾಗೂ ಏತನೀರಾವರಿ ಮೂಲಕ ತಾಲೂಕಿನಾದ್ಯಂತ ಇರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿದ್ದರಿಂದ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಬೋರ್‌ವೆಲ್, ಬಾವಿಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಇದರಿಂದ ಸಮಸ್ಯೆ ಕಂಡು ಬಂದಿಲ್ಲ. 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಬತ್ತಿ ಹೋಗಿದೆ. ಗಂಟೆಗೆ ಒಂದು ಕೊಡ ನೀರು ಬರುತ್ತಿದೆ. ತಾಲೂಕು ಆಡಳಿತ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎನ್ನುವುದು ಈ ವ್ಯಾಪ್ತಿಯ ಗ್ರಾಮಸ್ಥರ ಮನವಿ.
ಜೆಜೆಎಂ ಪ್ರಗತಿಯಲ್ಲಿ:ತಾಲೂಕಿನಲ್ಲಿ ಹಾದು ಹೋಗಿರುವ ಹೇಮಾವತಿ ನದಿಯು ತಾಲೂಕಿಗೆ ವರದಾನವಾಗಿದ್ದು ನದಿ ಮೂಲದಿಂದ ನೀರು ದೊರೆಯದ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿದರೆ ಏನು ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿರೀಸಾವೆ ಶ್ರವಣಬೆಳಗೊಳ ಏತನೀರಾವರಿ ಯೋಜನೆಯಿಂದ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ನದಿ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಆರಂಭವಾದಾಗಿನಿಂದ ಜೆಜೆಎಂ-1 ನೇ ಬ್ಯಾಚ್‌ನ 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ 17 ಗ್ರಾಮಗಳ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದೆ. ಜೆಜೆಎಂ 2ನೇ ಬ್ಯಾಚ್‌ನ 6 ಪಂಚಾಯಿತಿ ವ್ಯಾಪ್ತಿಯ 55 ಹಳ್ಳಿಗಳ 61 ಕಾಮಗಾರಿಗಳು ಪೂರ್ಣಗೊಂಡಿದ್ದು 7 ಕಾಮಗಾರಿಗಳು ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳುತ್ತವೆ. ಜೆಜೆಎಂ 4ನೇ ಬ್ಯಾಚ್‌ನ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯ 298 ಗ್ರಾಮಗಳ ಕಾಮಗಾರಿ ಪ್ರಗತಿಯಲ್ಲಿದ್ದು 41 ಗ್ರಾಮ ಪಂಚಾಯತಿಯ ಒಟ್ಟು 370 ಗ್ರಾಮಗಳಲ್ಲಿ ಯೋಜನೆಯ ಕಾಮಗಾರಿ ಸಂಪೂರ್ಣಗೊಂಡರೆ ತಾಲೂಕಿನ 370 ಗ್ರಾಮಗಳಲ್ಲಿ 24 ಗಂಟೆ ಕುಡಿಯುವ ನೀರು ಪೂರೈಕೆಯಾಗಿ ಸಮಸ್ಯೆ ಬಗೆಹರಿಯುತ್ತದೆ.