ಶಿಗ್ಗಾಂವಿ: ಮಳೆ ಇಲ್ಲ ಎಂದು ಕಂಗಾಲಾಗಿದ್ದ ತಾಲೂಕಿನ ಜನತೆಗೆ ಗುರುವಾರ ಸುರಿದ ಧಾರಾಕಾರ ಮಳೆ ಸಂತೋಷ ಉಂಟು ಮಾಡಿತಾದರೂ, ಕೆಲವೆಡೆ ರಸ್ತೆ, ಮನೆ, ತಗ್ಗುಪ್ರದೇಶಗಳು ಜಲಾವೃತಗೊಂಡು ಆತಂಕ ಮೂಡಿಸಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.
ಪಟ್ಟಣದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಚಾಲಕರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು. ಪಟ್ಟಣದ ಮಾರುತಿ ನಗರದಲ್ಲಿ ಮಳೆ ನೀರು ಚರಂಡಿ ಮೂಲಕ ಹರಿದು ಹೋಗದೆ ಅಲ್ಲಿನ ಗುಡಿಸಲು ನಿವಾಸಿಗಳು ಪರದಾಡುವಂತಾಯಿತು.
ಹೃದಯ ಭಾಗದಲ್ಲಿರುವ ಈಶ್ವರ ದೇವಸ್ಥಾನದ ರಸ್ತೆ, ಹೊಸ ಬಸ್ ನಿಲ್ದಾಣ, ಪ್ರವಾಸಿ ಮಂದಿರ ಸಂಪರ್ಕ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ಕಡೆಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯಿತು. ಇದರಿಂದ ಕೆಲ ಹೊತ್ತು ಜನಜೀವನ ಅಸ್ತವ್ಯಸ್ತಗೊಂಡಿತು. ಗ್ರಾಮೀಣ ಭಾಗದ ರೈತಾಪಿ ವರ್ಗ ಮಳೆಯಿಂದ ಸಂಭ್ರಮ ಪಟ್ಟರು.