ನೆರೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು.  
ಜಿಲ್ಲೆ

ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ವಿವಿಧೆಡೆ ಬುಧವಾರ ರಾತ್ರಿ ಮಳೆ ನೀರು ನುಗ್ಗಿ ಮನೆಗಳಲ್ಲಿ ಹಾನಿಯಾಗಿದೆ. ಬಹದ್ದೂರ್ ಶಾ ವಾರ್ಡ್, ಈಸ್ಟ್ ಬ್ಲಾಕ್ ವಾರ್ಡ್, ಮದ್ದುಗುಡ್ಡೆ, ಖಾರ್ವಿಕೇರಿ, ಒಂಬತ್ತುದಂಡಿಗೆ ಮೊದಲಾದೆಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ.

ಬಹುದ್ದೂರ್ ಷಾ ರಸ್ತೆ ಸುಡುಗಾಡು ತೋಡು ಬ್ಲಾಕ್ ಆಗಿ ಮಳೆ ನೀರು ಬಹುದ್ದೂರ್ ಷಾ ರಸ್ತೆ ಮತ್ತು ಖಾರ್ವಿ ಮೇಲ್ಕೇರಿ ನಿವಾಸಿಗಳ ಮನೆಗೆ ನುಗ್ಗಿದೆ. ತೋಡಿನ ತುಂಬಾ ಪ್ಲಾಸ್ಟಿಕ್ ಬಾಟಲಿ, ಇನ್ನಿತರ ತ್ಯಾಜ್ಯ ವಸ್ತುಗಳ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಮಳೆ ನೀರು ಸರಾಗವಾಗಿ ಹರಿಯಲು ತಡೆ ಉಂಟಾಗಿ ಮಳೆ ನೀರಿನ ಜತೆಗೆ ನದಿ ನೀರು ಸೇರಿಕೊಂಡು ಸಮೀಪದ ಮನೆಗಳಿಗೆ ನುಗ್ಗಿದೆ.

ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಸಂದೀಪ್ ಖಾರ್ವಿ, ಸಂತೋಷ್ ಶೆಟ್ಟಿ, ಅಶ್ವಿನಿ ಪ್ರದೀಪ್, ಮೋಹನ್‌ದಾಸ್ ಶೆಣೈ, ಶ್ವೇತಾ ಸಂತೋಷ್, ಮಾಜಿ ಸದಸ್ಯರಾದ ರಮೇಶ್ ಶೇರಿಗಾರ್, ರತ್ನಾಕರ್, ಕೆ.ಬಿ.ಪ್ರಕಾಶ್, ಸುನೀಲ್ ಖಾರ್ವಿ, ಸಂಪತ್ ಮೊದಲಾದವರು ಪುರಸಭೆ ಹಾಗೂ ತಾಲೂಕು ಆಡಳಿತದ ಜತೆ ಸಹಕರಿಸಿದರು. ತಹಸೀಲ್ದಾರ್ ಶೋಭಾಲಕ್ಷ್ಮೀ ಹಾಗೂ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರು ರಾತ್ರಿ ಕಾರ್ಯಾಚರಣೆ ನಡೆಸಿ ಒಂಬತ್ತುದಂಡಿಗೆ ವಾರ್ಡ್‌ನ ಕೆಲವು ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದರು. ಬಹದ್ದೂರ್ ಶಾ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ರಾತ್ರಿ 1 ಗಂಟೆಗೆ ತನಕ ಪೌರಕಾರ್ಮಿಕ ಬಂಧುಗಳು ಶ್ರಮವಹಿಸಿ ನೀರು ಸಂಪೂರ್ಣ ಇಳಿದು ಹೋಗುವ ತನಕ ಇದ್ದು ಜೆಸಿಬಿ ಮೂಲಕ ಚರಂಡಿಗೆ ಸಿಲುಕಿರುವ ಅಡೆತಡೆ ನಿವಾರಿಸಿದರು.