ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಬೇಸಿಗೆ ಶುರುವಾಗಿದ್ದು, ಸದ್ಯ ತಾಲೂಕಿನಲ್ಲಿ ನೀರಿನ ಬವಣೆ ಅತಿಯಾಗಿ ಕಾಣಿಸಿಲ್ಲ. ಆದರೆ, ಬಹುತೇಕ ಕಡೆ ಶುದ್ಧ ಕುಡಿವ ನೀರಿನ ಘಟಕಗಳು ಸಣ್ಣಪುಟ್ಟ ದುರಸ್ತಿಯಿಂದಾಗಿ ಹಳ್ಳಿ ಜನರು ಕೊಳವೆಬಾವಿ ಅವಲಂಬಿಸಿದ್ದು, ಫ್ಲೋರೈಡ್‌ಯುಕ್ತ ನೀರು ಸೇವಿಸುವಂತಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ 22 ಗ್ರಾಪಂಗಳಿವೆ. 112 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 98 ಚಾಲ್ತಿಯಲ್ಲಿದ್ದು, ಏಳು ದುರಸ್ತಿಯಲ್ಲಿವೆ ಎನ್ನುವುದು ಅಧಿಕಾರಿಗಳ ಮಾಹಿತಿ. ಆದರೆ, ನಾನಾ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ಗಳು ಹಲವು ದಿನಗಳಿಂದ ಸ್ಥಗಿತಗೊಂಡಿವೆ. ಇನ್ನೂ ಬಹುತೇಕ ಗ್ರಾಮಗಳಲ್ಲಿ ಸಣ್ಣ ಪುಟ್ಟ ರಿಪೇರಿ ಇದ್ದು, ಶುದ್ಧ ಕುಡಿವ ನೀರಿಗಾಗಿ ಸಾರ್ವಜನಿಕರು ಪಕ್ಕದ ಗ್ರಾಮವನ್ನು ಅವಲಂಬಿಸಿದ್ದಾರೆ. ಶುದ್ಧ ನೀರಿನ ಘಟಕಗಳನ್ನು ಗ್ರಾಪಂ, ಆರ್‌ಡಬ್ಲುೃಎಸ್ ಇಲಾಖೆ ಹಾಗೂ ಕೆಲ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿವೆ. ಕೆಟ್ಟು ನಿಂತ ಘಟಕಗಳ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.
ಪಪಂನಿಂದ ಮುಂಜಾಗ್ರತಾ ಕ್ರಮ
ಯಲಬುರ್ಗಾ ಪಟ್ಟಣದ 15 ವಾರ್ಡ್‌ಗಳಿಗೆ ಹಿರೇಹಳ್ಳದಿಂದ ಶುದ್ಧ ನೀರು ಪೂರೈಸಲಾಗುತ್ತದೆ. ಕೆಲ ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕೆಲ ವಾರ್ಡ್ ನಿವಾಸಿಗಳು ಸಾರ್ವಜನಿಕ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪಪಂಗೆ ಒತ್ತಾಯಿಸಿದ್ದಾರೆ. ಪಪಂ ವ್ಯಾಪ್ತಿಯ ಮೂರು ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಸಣ್ಣ ಪುಟ್ಟ ದುರಸ್ತಿ ಇವೆ. ನೀರಿನ ತೀವ್ರ ಸಮಸ್ಯೆ ಉಂಟಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ನೀರಿನ ಕೊರತೆ ಆಗದಂತೆ ಪಪಂ ಕ್ರಮ ವಹಿಸಿದೆ.
ಸಹಾಯವಾಣಿ ನಂಬರ್
ಬೇಸಿಗೆ ವೇಳೆ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ತಾಪಂ, ಗ್ರಾಪಂ ಮುಂಜಾಗ್ರತಾ ಕ್ರಮ ವಹಿಸಿವೆ. ನೀರಿಗಾಗಿ ಅಲೆದಾಟ, ಕೊರತೆ ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಸಂಪರ್ಕಿಸಲು ತಾಲೂಕು ಪಂಚಾಯಿತಿಯಿಂದ ಸಹಾಯವಾಣಿ (08534 220136) ಆರಂಭಿಸಲಾಗಿದೆ. ಯಾವುದೇ ಹಳ್ಳಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದರೆ ಈ ನಂಬರ್‌ಗೆ ಸಂಪರ್ಕಿಸಬಹುದು ಎಂದು ಇಒ ಸಂತೋಷ ಪಾಟೀಲ್ ತಿಳಿಸಿದ್ದಾರೆ.
17 ಗ್ರಾಮಗಳಲ್ಲಿ ಜೆಜೆಎಂ ಅರೆಬರೆ
ಜೆಜೆಎಂ ಮೂಲಕ ಪ್ರತಿ ಮನೆಗೆ ಶುದ್ಧ ನೀರು ಒದಗಿಸಲು ಸರ್ಕಾರ ಯೋಜನೆ ಜಾರಿಗೊಳಿಸಿದೆ. ಅದರಂತೆ ಯಲಬುರ್ಗಾ ಕ್ಷೇತ್ರ ವ್ಯಾಪ್ತಿಯ 153 ಹಳ್ಳಿಗಳಲ್ಲಿ ಕಾಮಗಾರಿ ನಿರ್ವಹಿಸಲು ಒಟ್ಟು 6.6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆ ಪೈಕಿ 136 ಹಳ್ಳಿಯಲ್ಲಿ ಕ್ರಿಯಾ ಯೋಜನೆಯಂತೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 17 ಗ್ರಾಮಗಳಲ್ಲಿ ಕಾಮಗಾರಿ ಮುಗಿದಿಲ್ಲ. ಕೆಲಸ ಪೂರ್ಣಗೊಂಡ ಕಡೆಗಳಲ್ಲಿ ಜಲೋತ್ಸವದ ಒಎಚ್‌ಟಿ (ಮೇಲ್ತೊಟ್ಟಿ) ಮೂಲಕ ಡಿಬಿಒಟಿ ನೀರು ಪೂರೈಸಲಾಗುತ್ತಿದೆ. ಇನ್ನೂ ಮೇಲ್ತೊಟ್ಟಿ ನಿರ್ಮಾಣವಾಗದ ಗ್ರಾಮಗಳಲ್ಲಿ ಕೊಳವೆಬಾವಿ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕೆಲ ಕಡೆ ಪೈಪ್‌ಲೈನ್ ಕಾಮಗಾರಿ ಮುಗಿಸಿ, ನಲ್ಲಿ ಅಳವಡಿಸಲಾಗಿದ್ದು, ಅವು ಕಿತ್ತು ಹೋಗಿದ್ದಲ್ಲದೆ, ನೀರು ಬರುತ್ತಿಲ್ಲ. ಬೇಕಾಬಿಟ್ಟಿಯಾಗಿ ಅರೆಬರೆ ಕೆಲಸ ನಿರ್ವಹಿಸಲಾಗಿದೆ. ಗ್ರಾಮೀಣರು ಫ್ಲೋರೈಡ್‌ಯುಕ್ತ ನೀರು ಸೇವಿಸುವುದು ತಪ್ಪಿಲ್ಲ ಎನ್ನವುದು ಹಳ್ಳಿಗರ ಆರೋಪವಾಗಿದೆ.
ಘಟಕಕ್ಕೆ ಮೀಟರ್ ಅಳವಡಿಸಿಲ್ಲ
ಸಂಕನೂರು ಗ್ರಾಪಂ ವ್ಯಾಪ್ತಿಯ ಕಾತ್ರಾಳದಲ್ಲಿ ಹಲವಾರು ದಿನಗಳಿಂದ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಪಡೆದು ಸಾರ್ವಜನಿಕರಿಗೆ ನೀರು ಪೂರೈಸಿದರೂ ಘಟಕಕ್ಕೆ ಮೀಟರ್ ಅಳವಡಿಸಿಲ್ಲ ಎಂದು ಗ್ರಾಮಸ್ಥರು ‘ವಿಜಯವಾಣಿ’ಗೆ ತಿಳಿಸಿದ್ದರು. ಸಂಬಂಧಿಸಿದ ಗ್ರಾಪಂ ಅಧಿಕಾರಿಗೆ ಸಂಪರ್ಕಿಸಿದಾಗ ಈ ಮುಂಚೆ ಘಟಕವನ್ನು ಏಜೆನ್ಸಿಯವರು ನಿರ್ವಹಿಸುತ್ತಿದ್ದರು. ಈಗ ಘಟಕವು ಸಣ್ಣ ಪುಟ್ಟ ದುರಸ್ತಿಯಲ್ಲಿದ್ದು, ಸರಿಪಡಿಸಿ ಗ್ರಾಪಂಗೆ ಹಸ್ತಾಂತರಿಸಿಕೊಳ್ಳಲಾಗುವುದು ಎಂದು ಸಂಕನೂರು ಗ್ರಾಪಂ ಪಿಡಿಒ ಮಹಾಂತೇಶ ಬಾಳಿಕಾಯಿ ತಿಳಿಸಿದ್ದಾರೆ.
ಸದ್ಯಕ್ಕೆ ತಾಲೂಕಿನ ಯಾವುದೇ ಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಈ ಕುರಿತು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ದುರಸ್ತಿಯಲ್ಲಿರುವ ಶುದ್ಧ ನೀರಿನ ಘಟಕ ಸರಿಪಡಿಸಲಾಗುವುದು.ಸಂತೋಷ್ ಪಾಟೀಲ್ತಾಪಂ ಇಒ, ಯಲಬುರ್ಗಾ
ಕಾತ್ರಾಳ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಒ ಪ್ಲಾಂಟ್‌ಗೆ ವಿದ್ಯುತ್ ಸಂಪರ್ಕ ಪಡೆದು ಮೀಟರ್ ಅಳವಡಿಸದೆ ನೀರು ಮಾರಾಟ ಮಾಡಿದ್ದಲ್ಲದೆ ಜೆಸ್ಕಾಂಗೆ ಬಿಲ್ ಕಟ್ಟಿಲ್ಲ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ವಿದ್ಯುತ್ ಕಡಿತಗೊಳಿಸಿದ್ದಾರೆ. ಪರಿಣಾಮ ನೀರಿನ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ಬಗೆಹರಿದರೂ ಪಿಡಿಒ ಮತ್ತು ಅಧ್ಯಕ್ಷರು ಗ್ರಾಪಂಗೆ ಹಸ್ತಾಂತರಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಗಮನಹರಿಸುತ್ತಿಲ್ಲ.ಸೈಯದ್ ಸಾಬ್ಕಾತ್ರಾಳ ಗ್ರಾಮಸ್ಥ
ನರಸಾಪುರದಲ್ಲಿ ಆರ್‌ಒ ಪ್ಲಾಂಟ್ ಸ್ಥಗಿತಗೊಂಡ ಪರಿಣಾಮ ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹರಿಸಬೇಕು.ಮಹೇಶ ಪೊ.ಪಾಟೀಲ್ನರಸಾಪುರ ಗ್ರಾಮಸ್ಥ
ಯಲಬುರ್ಗಾ ಪಟ್ಟಣದಲ್ಲಿ ಸದ್ಯ ಕುಡಿವ ನೀರಿನ ತೊಂದರೆ ಇಲ್ಲ. 15 ವಾರ್ಡ್‌ಗಳ ಪೈಕಿ ಎರಡು ವಾರ್ಡ್‌ನಲ್ಲಿ ಮಾತ್ರ ಎರಡು ದಿನಕ್ಕೊಮ್ಮೆ ಕುಡಿವ ನೀರು ಬರುತ್ತದೆ. ದಿನಬಳಕೆಗೆ ದಿನಾಲೂ ನೀರು ಸರಬರಾಜಾಗುತ್ತಿದೆ.ಅಮರೇಶ ಹುಬ್ಬಳ್ಳಿಪಪಂ ಅಧ್ಯಕ್ಷ, ಯಲಬುರ್ಗಾ