ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೋಯ್ನ, ದೂಧಗಂಗಾ ಮತ್ತು ರಾಜಾಪುರ, ಕಲ್ಲೊಳ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಗುರುವಾರ ಬೆಳಗ್ಗೆ 1.08ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದಾರೆ. 18 ಸೇತುವೆಗಳು ಜಲಾವೃತಗೊಂಡಿದ್ದು, 40ಕ್ಕೂ ಅಕ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ.
ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಅಲ್ಲಿನ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಟ್ಟಿದ್ದಾರೆ. ಹೀಗಾಗಿ ಕೃಷ್ಣಾ ನದಿಗೆ 1.08 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂಧಗಂಗಾ, ವೇದಗಂಗಾ, ಕೃಷ್ಣಾ ನದಿ ತೀರದ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದೆ. ನದಿಗಳ ಪ್ರವಾಹದಿಂದಾಗಿ ಮೂಡಲಗಿ, ಖಾನಾಪುರ, ಹುಕ್ಕೇರಿ ಸೇರಿ ವಿವಿಧ ಭಾಗಗಳಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಹಂತದ 8 ಮತ್ತು ಕೃಷ್ಣಾ ನದಿ ಪ್ರವಾಹದಿಂದ ಕೆಳಹಂತದ 10 ಸೇತುವೆ ಮುಳುಗಡೆಯಾಗಿವೆ.
ಖಾನಾಪುರ ಘಟ್ಟ ಪ್ರದೇಶಗಳಲ್ಲಿ ಬುಧವಾರ ಒಂದೇ ದಿನ 136 ಎಂಎಂ ಪ್ರಮಾಣ ಮಳೆಯಾಗಿದೆ. ಹೀಗಾಗಿ ಮಲಪ್ರಭಾ ನದಿ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯಕ್ಕೆ 10,999 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹುಕ್ಕೇರಿ ಸೇರಿ ಇತರ ತಾಲೂಕುಗಳಲ್ಲಿ ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾದಲ್ಲಿ ನೀರಿನ ಹರಿವು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 521.4 ಎಂ.ಎಂ. ಮಳೆಯಾಗಿದೆ. ಹಿಡಕಲ್ ಜಲಾಶಯಕ್ಕೆ 30,300 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಂದಾಜು 500 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ, ರಾಗಿ, ಗೆಣಸು, ಮೆಕ್ಕೆಜೋಳ, ಶೇಂಗಾ ಬೆಳೆಗಳು ಜಲಾವೃತಗೊಂಡು ಹಾನಿಯಾಗಿವೆ. ಖಾನಾಪುರ ತಾಲೂಕಿನ ಕೆಲ ಭಾಗದಲ್ಲಿ ಗೆಣಸನ್ನು ರೈತರು ಮೊಣಕಾಲುದ್ದ ನೀರಲ್ಲೇ ಕಟಾವು ಮಾಡುತ್ತಿದ್ದಾರೆ. ನಾಟಿ ಮಾಡಿರುವ ಗೆಣಸು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ಬೆಳೆಹಾನಿ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ 58 ವಾರ್ಡ್‌ಗಳಲ್ಲಿ ಚರಂಡಿ, ನಾಲಾಗಳು ಹೂಳು, ಪ್ಲಾಸ್ಟಿಕ್, ತರಕಾರಿ ತ್ಯಾಜ್ಯಗಳಿಂದ ತುಂಬಿದ್ದರಿಂದ ಮಳೆ ನೀರು ಚರಂಡಿ ಬಿಟ್ಟು ರಸ್ತೆ ಮೇಲೆ ಹರಿಯುತ್ತಿದೆ. ಕೆಲವು ತಗ್ಗು ಪ್ರದೇಶಗಳಿಗೆ ನುಗ್ಗಿ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಪಾಲಿಕೆಯವರು ಬೇಸಿಗೆಯಲ್ಲಿ ನಾಲಾ, ಚರಂಡಿಗಳನ್ನು ಸ್ವಚ್ಛಗೊಳಿಸದೆ ನಿರ್ಲಕ್ಷ ಮಾಡಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಕರ್ನಾಟಕ- ಗೋವಾ ಹೆದ್ದಾರಿಯಲ್ಲಿ ಬೃಹತ್ ಮರಗಳು ಉರುಳಿ ಬಿದ್ದು ಸಾಕಷ್ಟು ಸಮಸ್ಯೆ ಸೃಷ್ಟಿಸಿವೆ. ಈ ಹಿನ್ನೆಲೆ ಗೋವಾದಿಂದ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿದ್ದ ಭಕ್ತರು ಕಾಡಿನಲ್ಲಿ ಸಿಲುಕಿಕೊಂಡಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ ಮತ್ತು ಚಿಕಲೆ ಮಾರ್ಗದ ದಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ 4 ಗಂಟೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ನಡುವೆ ಪಂಢರಪುರ ಭಕ್ತರು ಗಂಟೆಗಟ್ಟಲೆ ಕಾಡಿನ ಮಧ್ಯದಲ್ಲೇ ಸಮಯ ಕಳೆದಿದ್ದಾರೆ. ಕೊನೆಗೆ ಸರ್ಕಾರಿ ಬಸ್ ಚಾಲಕ, ಪ್ರಯಾಣಿಕರು ಸೇರಿ ಮರಗಳನ್ನು ತೆರವುಗೊಳಿಸಿ ಪ್ರಯಾಣ ಬೆಳೆಸಿದ್ದರು.