ಸಿಂಧನೂರು: ತಾಲೂಕಿನ ವಿವಿಧ ಗ್ರಾಪಂಗಳಿಗೆ ಶನಿವಾರ, ಭಾನುವಾರ ಭೇಟಿ ನೀಡಿದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ತಂಡ ಫೀಲ್ಡ್ ಟೆಸ್ಟ್ ಕಿಟ್ ಅಭಿಯಾನ ಮೂಲಕ ಕುಡಿವ ನೀರನ್ನು ಪರೀಕ್ಷೆಗೆ ಒಳಪಡಿಸಿತು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಶ್ಯಾಮ್‌ಸುಂದರ್ ಕಾಳೇಕರ್ ನೇತೃತ್ವದ ತಂಡ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಡಿಗೋಳ, ಬಪ್ಪೂರ, ಗುಂಡ, ಎಲೆಕೂಡ್ಲಿಗಿ, ದೇವರು ಗುಡಿ, ಪಗಡದಿನ್ನಿ, ಗ್ರಾಪಂಗಳಲ್ಲಿ, ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕುಡಿವ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಲುಷಿತ ನೀರಿನ ಸೇವನೆಯಿಂದ ಸಂಭವಿಸುತ್ತಿರುವ ಅವಘಡ ತಡೆಯುವ ನಿಟ್ಟಿನಲ್ಲಿ ಫೀಲ್ಡ್ ಟೆಸ್ಟ್ ಕಿಟ್ ಅಭಿಯಾನ ನಡೆಸಿ, ಕುಡಿವ ನೀರಿನ ಮಾದರಿಗಳನ್ನು ಪರೀಕ್ಷಿಸಿತು.
ಇದನ್ನು ಓದಿ: ಕಲುಷಿತ ನೀರು ಸೇವನೆ ಅವಘಡಗಳೆಡೆ ಇರಲಿ ಎಚ್ಚರ
ಎಇಇ ಶಾಮ್‌ಸುಂದರ್ ಕಾಳೇಕರ್ ಮಾತನಾಡಿ, ನೀರಿನ ಮೂಲಗಳ ಸುತ್ತಲೂ ಸ್ವಚ್ಛಗೊಳಿಸುವ ಬಗ್ಗೆ ಹಾಗೂ ಕಾಲಕಾಲಕ್ಕೆ ಟೆಸ್ಟ್ ಕಿಟ್ ಮುಖಾಂತರ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ಅವಶ್ಯವಿದ್ದಲ್ಲಿ ತಾಲೂಕು ನೀರಿನ ಪರೀಕ್ಷಾ ಪ್ರಯೋಗಾಲಯಕ್ಕೆ ಕಳಿಸಬೇಕು. ನೀರು ಯೋಗ್ಯವಾಗಿದ್ದರೆ ಮಾತ್ರ ಬಳಸಬೇಕು ಎಂದರು.
ತಾಲೂಕು ಪ್ರಯೋಗಾಲಯ ಸಿಬ್ಬಂದಿ ಮೌನೇಶ್ ಬಡಿಗೇರ್, ಗ್ರಾಪಂ ಸಿಬ್ಬಂದಿ, ನೀರುಗಂಟಿಗಳು, ಗ್ರಾಮ ನೀರು ನೈರ್ಮಲ್ಯ ಸಮಿತಿಯ ಸದಸ್ಯರು ಭಾಗವಹಿಸಿದ್ದರು.