ಮಂಡ್ಯ: ನಗರದ ಕುಡಿಯುವ ನೀರಿನ ದರ ಪರಿಷ್ಕರಣೆ ಸಂಬಂಧ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಗುವುದು. ಆದರೆ 2018ರಿಂದ ನೀರಿನ ತೆರಿಗೆ ವಸೂಲಿಗೆ ಮುಂದಾಗಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2018ರ ಏ.1ರಿಂದ ಜಾರಿಗೆ ಬರುವಂತೆ ಮಂಡ್ಯ ನಗರಸಭೆಯ 2019ರ 21ರ ವಿಶೇಷ ಸಭೆಯ ಅನುಮೋದನೆಯೊಂದಿಗೆ 282 ರೂಗಳ ನಿಗದಿ ಮಾಡಲಾಗಿತ್ತು. ರಾಜ್ಯದ ಯಾವ ನಗರ ಸಭೆಗಳಲ್ಲೂ ಜಾರಿಯಾಗದ ಮತ್ತು ಹಣದಾಹಿ ನೀತಿ ಇದಾಗಿತ್ತು. ಇದನ್ನು ಖಂಡಿಸಿ ಹೋರಾಟ ಅನಿವಾರ್ಯವಾಗಿತ್ತು. ಅದರಂತೆ ಬೇಡಿಕೆಗೆ ಸ್ಪಂದಿಸಿ 225 ರೂಗೆ ಇಳಿಕೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದರ ಪರಿಷ್ಕರಣೆ ಸಂಬಂಧ ಆದೇಶ ಹೊರಡಿಸಲಾಗಿದೆ. ಆದರೆ ಹಿಂದೆ ಇದ್ದ ದರ ಅವೈಜ್ಞಾನಿಕವೆಂದು ಪರಿಗಣಿಸಿದ ಮೇಲೆ ಹೊಸದಾಗಿ ಪರಿಷ್ಕರಣೆಯಾದ ಆದೇಶವೂ 2018ರಿಂದಲೇ ಅನ್ವಯವಾಗಬೇಕು. ಈ ನಡುವೆ 2023 ಡಿಸೆಂಬರ್‌ನಿಂದ ಪರಿಷ್ಕರಣೆಯ ಹೊಸ ದರ ಅನ್ವಯದ ಜತೆಗೆ ಬಿಲ್ ಸಂದಾಯ ಮಾಡದಿರುವವರಿಗೆ ಬಡ್ಡಿ ಹಾಕುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಆಗ್ರಹಿಸಿದರು.
ವಿವಿಧ ಸಂಘಟನೆಯ ವೈ.ಥಾಮಸ್ ಬೆಂಜಮಿನ್, ಬೇಕ್ರಿ ರಮೇಶ್, ಎಂ.ಬಿ.ರಮೇಶ್, ಸಪ್ನಬೆಂಜಿ ಇದ್ದರು.