ಮಳವಳ್ಳಿ: ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ 247 ಕುಡಿಯುವ ನೀರಿನ ಯೋಜನೆ ಪಿ.ಎಂ.ನರೇಂದ್ರಸ್ವಾಮಿ ಅವರ ಪಾಪದ ಕೂಸಾಗಿದ್ದು, ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.
ಮಳವಳ್ಳಿ ಪಟ್ಟಣದಲ್ಲಿ ನಡೆದಿರುವ ಕುಡಿಯುವ ನೀರು ಪೂರೈಕೆ ಕಾಮಗಾರಿ ಕಳಪೆಯಿಂದ ಕೂಡಿದೆ. ಮಾಜಿ ಶಾಸಕರು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಹಾಗೂ ಸರ್ಕಾರಿ ಭೂಮಿ ಅಕ್ರಮವಾಗಿ ಖಾತೆಯಾಗಿದೆ ಎಂದು ಇತ್ತೀಚೆಗೆ ಶಾಸಕ ನರೇಂದ್ರಸ್ವಾಮಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 2016ರಲ್ಲಿ ಪಿಎಂಎನ್ ಶಾಸಕರಾಗಿದ್ದ 247 ಯೋಜನೆ ಮಂಜೂರಾತಿಯಾಗಿತ್ತು. ಅಂದು ಕಿಕ್‌ಬ್ಯಾಕ್ ಪಡೆದು ಕಳಪೆ ಕಾಮಗಾರಿ ನಡೆಸಲು ಅನುವು ಮಾಡಿದ್ದ ಮಹಾನುಭಾವರು ಇಂದೇಕೆ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಇಂದು ಅವರೇ ಅಧಿಕಾರದಲ್ಲಿದ್ದು, ನನ್ನ ಆಡಳಿತದ ಅವಧಿ ಸೇರಿದಂತೆ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು. ಅಂದಿನ ಪುರಸಭೆ ಆಡಳಿತ ನಿಮ್ಮ ಪಕ್ಷದ ವಶದಲ್ಲಿದ್ದಾಗಲೇ ನಮ್ಮ ಪಕ್ಷದ ಸದಸ್ಯರು ಈ ಯೋಜನೆಯ ಕಾಮಗಾರಿ ಲೋಪಗಳ ಬಗ್ಗೆ ಸಿಒಡಿ ತನಿಖೆ ಒತ್ತಾಯಿಸಿ ದೂರು ನೀಡಿದ್ದರು ಎಂದು ದಾಖಲೆ ಪ್ರದರ್ಶಿಸಿದರು.
ಕಿರುಗಾವಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಶೇ.75 ರಷ್ಟು ಕಾಮಗಾರಿ ಮುಗಿದಿದೆ. ಬನ್ನೂರು ಭಾಗದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲಸ ನಿಂತಿದೆ. ತಮ್ಮ ಕನಸಿನ ಕೂಸಿನ ಯೋಜನೆ ಸ್ಥಗಿತಗೊಂಡಿತ್ತು ಎಂಬ ಆರೋಪ ಮಾಡಿದ್ದೀರಿ. ಆದರೆ ನಮ್ಮ ಅವಧಿಯಲ್ಲಿ ಹನಿ ನೀರಾವರಿ ಯೋಜನೆಗೆ 300 ಕೋಟಿ ರೂ. ಕೊಡಿಸಿದ್ದೇನೆ. ತಿಟ್ಟಮಾರನಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದು, ತಾವು ಉದ್ಘಾಟನೆ ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಿ ಎಂದರು.
ಕೆಲ ಮಂದಿ ನಾವು ಶಾಸಕರ ಆಪ್ತರು ಎಂದುಕೊಂಡು ಹೊಸಹಳ್ಳಿ ಸುತ್ತಮುತ್ತ ಬಡ ರೈತರನ್ನು ಬೆದರಿಸಿ ಕಡಿಮೆ ಬೆಲೆಗೆ ಕೃಷಿ ಜಮೀನುಗಳನ್ನು ಬರೆಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಜತೆಗೆ ತಾಲೂಕಿನಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವುದು ತಮಗೆ ತಿಳಿದಿಲ್ಲವೇ ಎಂದು ಟೀಕಿಸಿದರು.
ಈ ಎಲ್ಲ ಅಕ್ರಮ ಚಟುವಟಿಕೆಗಳ ಬಗ್ಗೆ ಶೀಘ್ರವೇ ದಾಖಲೆ ಸಮೇತ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವರ ವಿರುದ್ಧ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ ವಹಿಸಿ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಜೆಡಿಎಸ್ ಮುಖಂಡರಾದ ಬುಲೆಟ್ ನಿಂಗಣ್ಣ, ಕಾಂತರಾಜು, ಅಂಕರಾಜು, ಸದಾನಂದ, ಸಿದ್ದಾಚಾರಿ, ಶ್ರೀಧರ, ಸಂತೋಷ, ಶಂಕರೇಗೌಡ, ನಾಗರಾಜು, ಪ್ರಭು, ಕಂಬರಾಜು, ಕೃಷ್ಣ ಇತರರಿದ್ದರು.